ಮೂಡಲಗಿ – ಕುಲಗೋಡದ ಬಲಭೀಮ ದೇವಸ್ಥಾನವು ಹಲವು ಇತಿಹಾಸವನ್ನು ಹೊಂದಿದ್ದು, ಬೇಡಿದವರಿಗೆ ವರವನ್ನು ಕೊಡುವ ಪವಿತ್ರ ದೇವರು ಬಲಭೀಮನು ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಕಳೆದ ಗುರುವಾರ ರಾತ್ರಿ ತಾಲ್ಲೂಕಿನ ಕುಲಗೋಡ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಜರುಗಿದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಭಕ್ತ ಸಮೂಹಕ್ಕೆ ಕುಲಗೋಡ ಬಲಭೀಮ ದೇವಸ್ಥಾನವು ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದವರು ತಿಳಿಸಿದರು.
ಕಾರ್ತೀಕೋತ್ಸವಕ್ಕೂ ಮುನ್ನ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ದೇವಸ್ಥಾನದವರು ಸಾರ್ವಜನಿಕರ ಸಹಕಾರದೊಂದಿಗೆ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯವಾಗಿದೆ. ಅರಭಾವಿ ಆಂಜನೇಯ, ಕಲ್ಲೊಳ್ಳಿ ಮಾರುತಿ ಮತ್ತು ಕುಲಗೋಡದ ಬಲಭೀಮ ಮಹಾನ್ ಶಕ್ತಿ ದೇವರು. ಅನೇಕ ಇತಿಹಾಸವನ್ನು ಹೊಂದಿವೆ. ನಮ್ಮ ರಾಜ್ಯವಲ್ಲದೇ ನೆರೆಯ ಮಹಾರಾಷ್ಟ್ರದವರು ಸಹ ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಅಷ್ಟೊಂದು ಶಕ್ತಿಯನ್ನು ವಾಯುದೇವರು ಹೊಂದಿದ್ದಾನೆ. ಸಕಲ ಜನತೆಗೆ ಬಲಭೀಮನು ಶಾಂತಿ, ಸಮೃದ್ಧಿ, ಆರೋಗ್ಯ ನೀಡಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪ್ರಾರ್ಥಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಭೀಮಶಿ ಪೂಜೇರಿ, ಸತ್ಯಧ್ಯಾನ ಆಚಾರ್ಯ, ನರಹರಿ ಆಚಾರ್ಯ, ರಾಜೇಂದ್ರ ಜೋಶಿ, ಪ್ರಸಿದ್ಧ ಉದ್ದಿಮೆದಾರ ಜೆ.ಎನ್. ಶೆಟ್ಟಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ ಭೂ-ನ್ಯಾಯ ಮಂಡಳಿ ಮಾಜಿ ಸದಸ್ಯ ಬಸನಗೌಡ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಗೋವಿಂದ ಕೊಪ್ಪದ, ತಾ.ಪಂ. ಮಾಜಿ ಸದಸ್ಯ ಸುಭಾಸ ವಂಟಗೋಡಿ, ಬಾಗಲಕೋಟ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜು ಯಡಹಳ್ಳಿ, ತಮ್ಮಣ್ಣ ದೇವರ, ದತ್ತು ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

