ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

Must Read

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕೃಷಿ ಮಾಡಿ ತಮ್ಮದೇ ಆದ ಛಾಪನ್ನು ಉಂಟು ಮಾಡಿದವರು ಡಾ. ದೇವೇಂದ್ರ ಕುಮಾರ ಹಕಾರಿ

ದೇವೇಂದ್ರಕುಮಾರ ಹಕಾರಿಯವರು ೧೯೩೧ರಲ್ಲಿ ರಾಯಚೂರು ಜಿಲ್ಲೆಯ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಜನಿಸಿದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಏ ಮತ್ತು ಎಮ್.ಏ. ಪದವಿ ಪಡೆದ ನಂತರ “ಜಾನಪದ ಸಾಮಾಜಿಕ ದುಃಖಾಂತ ಕಥನ ಗೀತೆಗಳು:ಒಂದು ಅಧ್ಯಯನ”ವೆನ್ನುವ ಮಹಾಪ್ರಬಂಧವನ್ನು ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ‍ಎಚ್.ಡಿ. ಪದವಿ ಪಡೆದರು.

ಭಾರತವು ಸ್ವಾತಂತ್ರ್ಯ ಪಡೆದಾಗ ಹೈದರಾಬಾದ ಸಂಸ್ಥಾನದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರು ಅನ್ನದಾನಯ್ಯ ಪುರಾಣಿಕರವರ ನಾಯಕತ್ವದಲ್ಲಿ, ಹೈದರಾಬಾದಿನಲ್ಲಿ ಕಾಲೇಜು ತೊರೆದು ಮುಂಡರಗಿಯ ಶಿಬಿರವನ್ನು ಸೇರಿದರು. ಈ ಶಿಬಿರದ ಓರ್ವ ಕಾರ್ಯಕರ್ತನಾಗಿ ಇವರು ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ರಜಾಕಾರರ ವಿರುದ್ಧ ಹೋರಾಡಿದ್ದಾರೆ.( ಉಲ್ಲೇಖ: ವಿಮೋಚನೆ ಪುಸ್ತಕದಲ್ಲಿ ಇವರು ಬರೆದಿರುವ ಲೇಖನ).

೧೯೫೮ರಿಂದ ೧೯೬೯ರವರೆಗೆ ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ೧೯೯೧ರವರೆಗೆ ಕರ್ನಾಟಕ ಮಹಾವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.ನಿವೃತ್ತಿಯ ನಂತರ ಧಾರವಾಡದ ಶ್ರೀನಗರದಲ್ಲಿ ನೆಲೆಸಿದ್ದರು. ಇದಲ್ಲದೆ ಆಕಾಶವಾಣಿಯ ಸಲಹೆಗಾರರಾಗಿ ಹಾಗು ಜಾನಪದ ಅಕಾಡೆಮಿಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ತ್ರಿವೇಂದ್ರಮ್‍ದಲ್ಲಿರುವ “ದ್ರಾವಿಡ ಭಾಷಾ ವಿಜ್ಞಾನ ಕೇಂದ್ರ”ದ ಆವರಣದಲ್ಲಿ ರೂಪುಗೊಂಡಿರುವ “ದಕ್ಷಿಣ ಭಾರತೀಯ ಭಾಷಾ ಜಾನಪದ ಸಂಸ್ಥೆ”ಯ ಸ್ಥಾಪಕರು ಹಾಗು ಉಪಾಧ್ಯಕ್ಷರಾಗಿದ್ದರು.

*ಹಕಾರಿಯವರ ಕೃತಿಗಳು ಇಂತಿವೆ:*

*ಕವನ ಸಂಕಲನ* ಚಿನ್ಮಯಿ, ಆಚೆ-ಈಚೆ, ಬಿಡುಗಡೆ, ನನ್ನ ಸುತ್ತ

*ನಾಟಕಗಳು* ಅಮೃತಮತಿ, ಶಾಕುಂತಲಾ,ಕ್ಷಿತಿಜದಾಚೆ

*ಕಾದಂಬರಿಗಳು* ಕೂಗುತಿವೆ ಕಲ್ಲು, ಚೆಲ್ವ ಕೋಗಿಲೆ

*ಕಥಾ ಸಂಕಲನ* ಚಾಟಿ, ಒರೆಗಲ್ಲು

*ಚರಿತ್ರೆ* ಆರದ ದೀಪ,ಶಿರಸಂಗಿ ಲಿಂಗರಾಜರು,ಮೈಲಾರ ಬಸವಲಿಂಗ ಶರಣರು,ಆಲೂರು ವೆಂಕಟರಾಯರು, ನೀಲಕಂಠ ಬುವಾ, ದಿ. ಚಂದ್ರಶೇಖರ ಪಾಟೀಲ, ನಾಗಚಂದ್ರ,ಮಾದಾರ ಚನ್ನಯ್ಯ,ನೇಮಿಚಂದ್ರ,ಮೋಳಿಗೆಯ ಮಾರಯ್ಯ

*ವಿಮರ್ಶೆ* ಸಾಹಿತ್ಯ ಸಮ್ಮುಖ, ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನೀಯ

*ಜಾನಪದ*ಜಾನಪದೀಯ ಗರತಿಯ ಹಾಡುಗಳಲ್ಲಿ ಕೌಟುಂಬಿಕ ಜೀವನ ಚಿತ್ರಣ,ಜಾನಪದ ಮೂಲಭೂತ ತತ್ವಗಳು,ಜಾನಪದ ಸಮ್ಮುಖ,ಜಾನಪದ ಭಂಡಾರ

*ಸಂಪಾದನೆ*ಬಸವರಾಜದೇವರ ರಗಳೆ,ಕಾಯಕದ ಐದು ರಗಳೆಗಳು,ನಾಟಕ ತ್ರಿದಲ

*ಸಣ್ಣ ಕತೆಗಳು* ವಿಜಯ ಕಲ್ಯಾಣನಗರಿ(ಡಾ.ಜವಳಿಯವರ ಜೊತೆಗೆ) ಅಕಾಡೆಮಿ ೧೯೮೯ರ ಕನ್ನಡ ಕಾವ್ಯ.

*ಅನುವಾದ*ಉರ್ದು ಸಾಹಿತ್ಯ ಚರಿತ್ರೆ,ದಸ್ ಸ್ಪೇಕ್ ಬಸವ ಇಂಗ್ಲಿಷ್

*ಗೌರವ ಹಾಗು ಪ್ರಶಸ್ತಿ*

ಜಾನಪದ ತಜ್ಞ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.೧೯೯೩ರಲ್ಲಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಲ್ಲದೆ,೧೯೯೩ರಲ್ಲಿ ನಡೆದ ೬೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷರಾಗಿದ್ದರು.

*ನಿಧನ*
ದೇವೇಂದ್ರಕುಮಾರ ಹಕಾರಿಯವರು ೨೦೦೭ರ ಎಪ್ರಿಲ್ ೭ರಂದು ನಿಧನರಾದರು.

ಒಬ್ಬ ಕನ್ನಡ ಸಾಹಿತಿ, ಶ್ರೇಷ್ಠ ಜಾನಪದ ತಜ್ಞ, ವಿಮರ್ಶಕ, ಮತ್ತು ಅಧ್ಯಾಪಕರು; ಅವರು ಕಾದಂಬರಿಗಳು, ಕವನಗಳು, ವಿಮರ್ಶೆ, ಜಾನಪದ ಅಧ್ಯಯನ ಮತ್ತು ಗೀತನಾಟಕಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ, ವಿಶೇಷವಾಗಿ “ಕೂಗುತಿವೆ ಕಲ್ಲು”, “ಚೆಲ್ವ ಕೋಗಿಲೆ”, ಮತ್ತು ಜಾನಪದ ಕೃತಿಗಳಿಗೆ ಹೆಸರುವಾಸಿಯಾಗಿದ್ದರು

ಇಂತಹ ಒಬ್ಬ ಹೈದ್ರಾಬಾದ ಕರ್ನಾಟಕದ ಪ್ರದೇಶದಿಂದ ಬಂದು ಚಳವಳಿ ಸಂಘರ್ಷ ಹೋರಾಟ ಮನೋಭಾವದ ಡಾ ದೇವೇಂದ್ರ ಕುಮಾರ ಹಕಾರಿ ಅವರ ಜೊತೆಗೆ ನನ್ನ ಒಡನಾಟ ಹೀಗಿತ್ತು. ೧೯೮೪ ರ ಸಂದರ್ಭ ನಮ್ಮೂರಿನ ಕಾಲೇಜಿನಲ್ಲಿ ಡಾ ದೇವೇಂದ್ರ ಕುಮಾರ ಹಕಾರಿ ಮತ್ತು ಡಾ ಬುದ್ಧಣ್ಣ ಹಿಂಗಮಿರೆ ಇವರನ್ನು ಕನ್ನಡ ಸಂಘಕ್ಕೆ ಕರೆದುಕೊಂಡು ಬರುವ ಅವಕಾಶ ಜವಾಬ್ದಾರಿ ನನ್ನದಾಗಿತ್ತು. ಅವರಿರುವ ಕಲ್ಯಾಣ ನಗರದ ಮನೆಗೆ ಮತ್ತು ಡಾ ಬುದ್ಧಣ್ಣ ಹಿಂಗಮಿರೆ ಇವರ ಎಮ್ಮಿ ಕೆರಿಯ ಮನೆಗೆ ಹೋಗಿ ಭೇಟಿ ಆಗಿ ಒಪ್ಪಿಸಿಕೊಂಡು ಬಂದೆ. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ ದೇವೇಂದ್ರ ಕುಮಾರ ಹಕಾರಿ ಅವರು ತಮ್ಮ ನೈಜ ಜನಪದ ಉಡುಪು ಧೋತರ ಮತ್ತು ನೆಹರು ನಿಲುವಂಗಿ ತೊಟ್ಟ ಕಾರ್ಯಕ್ರಮದಲ್ಲಿ ಜನಪದ ಗೀತೆಗಳನ್ನು ಹಾಡಿ ಇಡಿ ಸಭಿಕರನ್ನು ರಂಜಿಸಿದರು. ಇಂತಹ ಸರಳ ಸಜ್ಜನಿಕೆಯ ಸ್ನೇಹಪರ ಸಾಹಿತಿಗೊಂದು ನಮನಗಳು.
_________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಸಿಂದಗಿ ; ಸಂಭ್ರಮದಿಂದ ಜರುಗಿದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ 

ಸಿಂದಗಿ: ಸಿಂದಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತ ಸಮೂಹದೊಂದಿಗೆ ದೇವಸ್ಥಾನದಿಂದ...

More Articles Like This

error: Content is protected !!
Join WhatsApp Group