ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.
ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ ಆಗಲ್ಲ ಅಂತ ಪ್ರಚೋದನೆ ಮಾಡತಿದ್ದಾರೋ ಅಥವಾ ಹತಾಶೆಯಿಂದ ಎತ್ತಿಕಟ್ಟುತ್ತಿದ್ದಾರೋ ಗೊತ್ತಿಲ್ಲ ಆದರೆ ಸಿಕ್ಕಿ ಹಾಕಿಕೊಂಡು ತೊಂದರೆ ಅನುಭವಿಸೋದು ಮಾತ್ರ ನೀವು.
ಕಳೆದ ಮೂರು ದಿನಗಳಲ್ಲಿ ನಡೆದ ಮೂರು ಘಟನೆಗಳ ಬಗ್ಗೆ ಹೇಳುತ್ತೇನೆ. ಯಾವುದು ಸರಿ ಯಾವುದು ತಪ್ಪು ನೀವು ಮನನ ಮಾಡಿಕೊಳ್ಳಿ.
1) ಒಂದು ಇತ್ತೀಚೆಗೆ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡುವ ಭರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಅವಮಾನ ಮಾಡಿದರು ಅಂತ ಪ್ರತಿಭಟನೆ ಆರಂಭವಾದವು. ಲಕ್ಷ್ಮಿ ಅವರು ಮಾಧ್ಯಮಗಳ ಮೂಲಕ ಆಕ್ರೋಶ ಹೊರ ಹಾಕಿದರು. ರಾಜ್ಯ ಮಹಿಳಾ ಆಯೋಗ ಕೂಡ ಸಂಜಯ ಪಾಟೀಲ ವಿರುದ್ಧ ಸ್ವಯಂ ಪ್ರೇರಿತ ದೂರು ಕೂಡ ದಾಖಲಿಸಿಕೊಂಡಿತು.
ಆದರೆ ಕಾರ್ಯಕರ್ತರು ಯಾರ ಪ್ರಚೋದನೆಯಿಂದ ಹೋದರೊ ಅಥವಾ ಈ ಸನ್ನಿವೇಶದಲ್ಲಿ ತಮ್ಮ ಪ್ರತಾಪ ತೋರಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಆತ್ಮೀಯ ರಾಗಿ ಅದರಿಂದ ಲಾಭ ಪಡೆಯಬೇಕು ಅಂತ ಹೋದರೊ ತಿಳಿಯದು. ಒಟ್ಟಿನಲ್ಲಿ ಸಂಜಯ ಪಾಟೀಲ ಮನೆಗೆ ಆಕ್ರಮ ಪ್ರವೇಶ ಮಾಡಿ, ವಿಡಿಯೋ ಮಾಡಲು ಬಂದ ಅವರ ಡ್ರೈವರ್ ಮೇಲೆ ಹಲ್ಲೆ ಮಾಡುವುದಲ್ಲದೆ ಸಂಜಯ ಪಾಟೀಲ ಅವರಿಗೆ ಅಶ್ಲೀಲವಾಗಿ ಬೈದು ಗಲಾಟೆ ಮಾಡಿ ಹತ್ತು ಜನ ಕ್ರಿಮಿನಲ್ ಪ್ರಕರಣ ಹೊತ್ತುಹೋದರೆಡರು.
2) ದೇವೇಗೌಡರ ಕಾರ್ಯಕ್ರಮಕ್ಕೆ ಬಂದ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಯ ವಿರುದ್ಧ ವೇದಿಕೆ ಮೇಲೆ ನುಗ್ಗಿ ಘೋಷಣೆ ಕೂಗಿ ಪ್ರಕರಣ ಮೈಮೇಲೆ ಎಳೆದು ಕೊಂಡರು. ಪ್ರತಿಭಟನೆಗೆ ಸಾಮಾಜಿಕ ಮಾಧ್ಯಮ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಇತರ ಆಯ್ಕೆಗಳಿದ್ದರೂ ಕೂಡ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ತೊಂದರೆಗೆ ಸಿಲುಕಿದರು.
3) ಬೆಂಗಳೂರಿನ ರಾಘವೇಂದ್ರ ಸಹಕಾರಿ ಸಂಘದವರು ಸಂಸದ ತೇಜಸ್ವಿಸೂರ್ಯ ಅವರಿಗೆ ಬೆಂಬಲ ನೀಡಿ ಅಭಿನಂದನೆ ಸಲ್ಲಿಸಲು ಹೋದರೆ ಅಲ್ಲಿಯೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ನುಸುಳಿ ಸೂರ್ಯ ವಿರುದ್ಧ ಘೋಷಣೆ ಕೂಗಿ ಗಲಾಟೆ ಎಬ್ಬಿಸಿದರು. ಆಗ ಸೂರ್ಯ ಎದ್ದು ಹೊರಟು ಹೊದರೆ, ಸೌಮ್ಯ ರೆಡ್ಡಿ ಅವರು ತೇಜಸ್ವಿಸೂರ್ಯ ರಾಘವೇಂದ್ರ ಸಹಕಾರಿ ಠೇವಣಿದಾರರ ಮೇಲೆ ಹಲ್ಲೆ ಮಾಡಿದರು ಅಂತ ಹೇಳಿಕೆ ನೀಡಿದರು. ಈಗ ತೇಜಸ್ವಿ ಸೂರ್ಯ, ಸೌಮ್ಯ ರೆಡ್ಡಿ ಸೇರಿದಂತೆ ಆಹ್ವಾನವಿರದಿದ್ದರೂ ಸಭೆಗೆ ಬಂದು ಗಲಾಟೆ ಮಾಡಿದವರ ವಿರುದ್ಧ ಹಾಗೂ ಸುಳ್ಳು ಹಬ್ಬಿಸಿದವರ ವಿರುದ್ಧ ದೂರು ನೀಡಿದ್ದಾರೆ.
ನಾವು ಈ ಮೇಲಿನ ಮೂರು ಘಟನೆಗಳ ತುಲನೆ ಮಾಡಿದಾಗ ಈ ಎಲ್ಲ ಯೋಜನೆಗಳನ್ನು ಮಹಿಳಾ ಕಾರ್ಯಕರ್ತರ ಮೂಲಕವೆ ಅನುಷ್ಠಾನ ಮಾಡಿದ್ದಾರೆ ಹಾಗೂ ಹೋರಾಟ ಮಾಡಲು ಕಾನೂನು ಬದ್ಧವಾದ ವಿವಿಧ ಮಾರ್ಗಗಳಿದ್ದಾಗ್ಯೂ ಕೂಡ ಕಾನೂನಿಗೆ ವಿರುದ್ಧವಾದ ಮಾರ್ಗವನ್ನು ಬಳಸಿಕೊಳ್ಳಲಾಗಿದೆ.
ಉಪ್ಪುಂಡವರು ನೀರು ಕುಡಿಯಲೆ ಬೇಕು. ಹಾಗಂತ ನಾವೆ ನೀರು ಕುಡಿಸಬೇಕು ಅಂತ ಹೋದರೆ ಅದೇ ನೀರಿನಲ್ಲಿ ತೊಯ್ಯಬೇಕಾದುದು ಅನಿವಾರ್ಯ. ಕಾನೂನು ಕ್ರಮ ಇದ್ದಾಗ್ಯೂ ಕಾನೂನು ಕೈಗೆ ತೆಗೆದುಕೊಂಡದ್ದು ತಪ್ಪು. ಈ ಕಾರಣಕ್ಕೆ ಅಲ್ವಾ ಗಾಜಿನ ಮನೆಯಲ್ಲಿ ಇರುವವರು ಇತರರ ಮೇಲೆ ಕಲ್ಲನ್ನು ಎಸೆಯಬಾರದು. ಎನ್ನುವದು? ಒಟ್ಟಿನಲ್ಲಿ ಮಾಡಿದ್ದುಣ್ಣೊ ಮಹಾರಾಯ ಅಂತ ಕ್ರಿಯೆ ಹಾಗೂ ಪ್ರಕ್ರಿಯೆ ನೀಡಿದ ಎರಡು ಕಡೆಯವರು ಈಗ ಅನುಭವಿಸಲೇಬೇಕು.
ಮಲ್ಲಿಕಾರ್ಜುನ ಚೌಕಶಿ, ವಕೀಲರು