ಬೀದರ: ಬಿಜೆಪಿ ಹೈಕಮಾಂಡ್ ಗೆ ಬೀದರ್ ಉತ್ತರ ಹಾಗೂ ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್ ಶುರುವಾಗಿದ್ದು ಟಿಕೆಟ್ ಘೋಷಣೆ ಮಾಡದೇ ಹೈಕಮಾಂಡ್ ಸಸ್ಪೆನ್ಸ್ ಉಳಿಸಿದ್ದಾರೆ.
ಬೀದರ್ ಕ್ಷೇತ್ರದಲ್ಲಿ ಲಿಂಗಾಯತ-ಒಬಿಸಿ ಫೈಟ್ ಹೈಕಮಾಂಡ್ ಗೆ ತಲೆನೋವಾಗಿದ್ದು ಲಿಂಗಾಯತರಿಗೆ ಮಣೆ ಹಾಕಬೇಕಾ..! ಅಥವಾ ಓಬಿಸಿ ಗೆ ಟಿಕೆಟ್ ನೀಡಬೇಕಾ..? ಹಳಬರಿಗೆ ಕೊಡಬೇಕಾ ಅಥವಾ ಹೊಸ ಮುಖವನ್ನು ಅಖಾಡಕ್ಕಿಳಿಸಬೇಕಾ? ಎಂಬ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದಂತೆ ಕಾಣುತ್ತಿದೆ. ಹಾಲಿ ಶಾಸಕ ರಹೀಮ್ ಖಾನ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ನಾನಾ ರಣತಂತ್ರ ಹೆಣೆಯುತ್ತಿದ್ದು ಇದಕ್ಕಾಗಿ ಅಳೆದು, ತೂಗಿ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಲಿಂಗಾಯತ ಸಮುದಾಯದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಹಿಂದಿನ ಸಲದ ಪರಾಜಿತ ಅಭ್ಯರ್ಥಿ ಸೂರ್ಯಕಾಂತ ನಾಗರಮಾರಪಳ್ಳಿ ಹಾಗೂ ಹಿರಿಯ ಉದ್ಯಮಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಅವರ ಮಧ್ಯೆ ಟಿಕೆಟ್ ಗಾಗಿ ಭಾರಿ ಪೈಪೋಟಿ ಶುರುವಾಗಿದೆ. ಇನ್ನೂ ಒಬಿಸಿ ಯಿಂದ ಈಶ್ವರ ಸಿಂಗ್ ಠಾಕೂರ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ ಹೆಸರು ಕೂಡಾ ಕೇಳಿ ಬರುತ್ತಿವೆ.
ಭಾಲ್ಕಿಯಲ್ಲೂ ಲಿಂಗಾಯತರಿಗೆ ಟಿಕೆಟ್ ನೀಡಬೇಕಾ, ಇಲ್ಲಾ ಮರಾಠರಿಗೆ ಟಿಕೆಟ್ ನೀಡಬೇಕಾ ಎಂಬ ಗೊಂದಲದಲ್ಲಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಲಿಂಗಾಯತರಾದ ಪ್ರಕಾಶ್ ಖಂಡ್ರೆ ಹಾಗೂ ಡಿಕೆ ಸಿದ್ರಾಮ್ ಗೆ ಕೊಡಬೇಕಾ ಇಲ್ಲಾ ಮರಾಠ ಮುಖಂಡ ಡಾ. ದಿನಕರ್ ಗೆ ನೀಡಬೇಕಾ ಎಂಬ ಗೊಂದಲ ಕೂಡ ಹೈಕಮಾಂಡ್ ನಲ್ಲಿ ಇದೆ.
ಈ ಹಿನ್ನೆಲೆ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆ ಮಾಡಿದ್ದು ಬಸವಕಲ್ಯಾಣದಿಂದ ಶರಣು ಸಲಗರ್ ಗೆ, ಔರಾದ್‌ನಿಂದ ಪ್ರಭು ಚವ್ಹಾಣ್ ಗೆ, ಹುಮ್ನಾಬಾದ್ ನಿಂದ ಸಿದ್ದು ಪಾಟೀಲ್ ಗೆ ಹಾಗೂ ಬೀದರ್ ದಕ್ಷಿಣದಿಂದ ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಘೋಷಣೆ ಮಾಡಿದೆ.
ವರದಿ: ನಂದಕುಮಾರ ಕರಂಜೆ, ಬೀದರ