ಮೂಡಲಗಿ: ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ಯುವಕರು ಅತ್ಯಂತ ಉತ್ಸಾಹದಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸ ಉಂಟುಮಾಡಿದೆ ಎಂದು ಗೋಕಾಕದ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಈಟಿ ಹೇಳಿದರು.
ಅವರು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್, ಯುಥ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ರೋಟರಿ ರಕ್ತ ಭಂಡಾರ ಗೋಕಾಕ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದರು.
ಪ್ರೊ. ಡಿ.ಎಸ್.ಹುಗ್ಗಿ ಮಾತನಾಡಿ, ವಿವೇಕಾನಂದರ ಚಿಂತನೆಗಳು, ಅವರ ಆದರ್ಶಗಳು, ಬದುಕಿನ ರೀತಿ ಭಾರತ ಮಾತ್ರವಲ್ಲದೇ ಜಗತ್ತಿನ ಸಮಸ್ತ ಜನಾಂಗಕ್ಕೆ ದಾರದೀಪವಾಗಿವೆ. ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿವೆ. ನನಗೆ ಬೇಕಾದುದು ಕಬ್ಬಿಣದ ಮಾಂಸಖಂಡಗಳು, ಉಕ್ಕಿನಂತಹ ನರಮಂಡಲ ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೆ ಬದಲಾಯಿಸಬಲ್ಲೆ ಎಂದು ಸ್ವಾಮಿಜಿಗಳು ನುಡಿದಿದ್ದನ್ನು ಸ್ಮರಿಸಿದರು.
ರೋಟರಿ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಗಂಜಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಳ್ಳದೆ ತಂದೆತಾಯಿ-ಶಿಕ್ಷಕರ ಮಾಗದರ್ಶನದಲ್ಲಿ ನಡೆದು ಸತ್ ಪ್ರಜೆಗಳಾಗಿ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರೊ. ಎಂ. ಬಿ. ಕುಲಮೂರ ಮಾತನಾಡಿದರು. ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಗಿರೀಶ ಝಂವರ, ಕಾಲೇಜಿನ ಸಿಬ್ಬಂದಿಗಳಾದ ಬಿ.ಬಿ.ವಾಲಿ, ಆರ್.ಎಸ್.ಪಂಡಿತ, ವಿ.ವಾಯ್.ಕಾಳೆ. ರಾಜಶ್ರೀ ತೋಟಗಿ, ಮಲ್ಲಪ್ಪ ಕರಗಣ್ಣಿ, ಬಿ.ಸಿ.ಮಾಳಿ, ಸಂತೋಷ ಬಂಡಿ, ಸಂತೋಷ ಜೋಡಕುರಳಿ, ಮುಸ್ತಪ್ಪಾ ಜಾಲಗಾರ, ಸಾಗರ ಐದಮನಿ, ಶಿಕ್ಷಕೇತರ ಸಿಬ್ಬಂದಿ, ರಕ್ತದಾನಿಗಳು ಉಪಸ್ಥಿತರಿದ್ದರು.
ಡಾ. ಕೆ.ಎಸ್.ಪರವ್ವಗೋಳ ನಿರೂಪಿಸಿದರು, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಶಿಲ್ಪಾ ನಾಯಿಕವಾಡಿ ಸ್ವಾಗತಿಸಿದರು, ಸಿಂಧು ನಾಯಿಕವಾಡಿ ಪ್ರಾರ್ಥಿಸಿದರು, ವಿಲಾಸ ಕೆಳಗಡೆ ವಂದಿಸಿದರು.