ಮೈಸೂರು – ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ,ಗ್ರಂಥಾಲಯಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಕುವೆಂಪು, ದ. ರಾ .ಬೇಂದ್ರೆ , ಶಿವರಾಮ ಕಾರಂತ , ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ.ಗೋಕಾಕ್, ಯು.ಆರ್.ಅನಂತ ಮೂರ್ತಿ , ಗಿರೀಶ್ ಕಾರ್ನಾಡ್ , ಚಂದ್ರ ಶೇಖರ ಕಂಬಾರ ಅವರ ಭಾವ ಚಿತ್ರಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆ ಮೂಲಕ ಶಾಲಾ ಮಕ್ಕಳಲ್ಲಿ ಸಾಧಕ ಕವಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಭೇರ್ಯ ರಾಮಕುಮಾರ್ ನುಡಿದರು.
ಮೈಸೂರು ಜಿಲ್ಲೆಯ ಸಾಲಿಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ವರಕವಿ ದ . ರಾ.ಬೇಂದ್ರೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ವರಕವಿ ದ. ರಾ.ಬೇಂದ್ರೆ ಅವರು ಜೀವನದಲ್ಲಿ ನೊಂದು , ಬೆಂದರೂ ಜೀವನ ಪ್ರೀತಿ ಬಿಡಲಿಲ್ಲ. ತಮ್ಮ ಒಂಬತ್ತು ಮಕ್ಕಳ ಪೈಕಿ ಆರು ಮಕ್ಕಳನ್ನು ಕಳೆದುಕೊಂಡರು. ಸ್ವಾತಂತ್ರ ಜಾಗೃತಿ ಕವಿತೆ ಬರೆದು ಶಿಕ್ಷಕ ಹುದ್ದೆ ಕಳೆದುಕೊಂಡರು. ಜೈಲು ವಾಸವನ್ನೂ ಅನುಭವಿಸಿದರು.ಆದರೂ ಅವರ ಕಾವ್ಯ ರಚನೆಯ ಶಕ್ತಿ ಕುಂದಲಿಲ್ಲ. ನೋವಿನಲ್ಲೂ ಸಮಾಜದಲ್ಲಿ ಕಾವ್ಯ ಜಾಗೃತಿ ಮೂಡಿಸಿದ ಸಾದನೆ ಅವರದು ಎಂದು ಶ್ಲಾಘಿಸಿದರು.
ವರಕವಿ ಬೇಂದ್ರೆ ಅವರು ಶಬ್ದ ಗಾರುಡಿಗ. 27 ಕವನ ಸಂಕಲನಗಳು ಸೇರಿದಂತೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ನಾದಲೀಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆತಿದೆ. ಅವರ ಸಾಹಿತ್ಯ ಸಾದನೆ ಅಮೂಲ್ಯ,ಅಪಾರ ಎಂದು ರಾಮ ಕುಮಾರ್ ಬಣ್ಣಿಸಿದರು.
ಮತ್ತೊಬ್ಬ ಮುಖ್ಯ ಅತಿಗಳಾದ ಶ್ರೀಮತಿ ಜ್ಯೋತಿ ಜಯಸೇನ ಕುಮಾರ್ ಅವರು ಮಾತನಾಡಿ ಗ್ರಂಥಾಲಯಗಳು ಮಕ್ಕಳಿಗೆ ದಾರಿದೀಪಗಳು. ಗ್ರಂಥಾಲಯಗಳು ಜ್ಞಾನದ ಕಣಜಗಳು. ಮಕ್ಕಳು ಇಲ್ಲರುವ ಪುಸ್ತಕಗಳನ್ನು ಓದಬೇಕು.ತಮ್ಮ ಜ್ಞಾನವನ್ನು ವಿಸ್ತರಿಸಿ ಕೊಳ್ಳಬೇಕು. ಆ ಮೂಲಕ ಜೀವನದಲ್ಲಿ ಯಶಸ್ಸಿನತ್ತ ಸಾಗಬೇಕು ಎಂದು ಕರೆ ನೀಡಿದರು.
ಶಿವಕುಮಾರ್, ವೆಂಕಟೇಶ್ ಸಭೆಯಲ್ಲಿ ಮಾತನಾಡಿದರು. ಗ್ರಂಥಪಾಲಕ ದಿವ್ಯ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬೇಂದ್ರೆ ಅವರನ್ನು ಕುರಿತು ಬಾಲಕಿ ಆಶ್ವಿಕಾ ಮಾತನಾಡಿದಳು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ದೀಕ್ಷಿತ್ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಯುವರಾಜ್ ಅವರಿಗೆ ಬಹುಮಾನ ವಿತರಿಸಲಾಯಿತು.