೨ ಲಕ್ಷ ಪ್ರಾಥಮಿಕ ಕೃಷಿ ಹೈನುಗಾರಿಕೆ ಮೀನುಗಾರಿಕೆ ಸಹಕಾರಿ ಸಂಸ್ಥೆಗಳ ಸ್ಥಾಪನೆ ನಿರ್ಧಾರ
ಮೂಡಲಗಿ: ರೈತರು ಬೆಳೆದ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಅವರ ಆದಾಯವನ್ನು ದ್ವಿಗುಣಗೊಳಿಸಲು ಗ್ರಾಮ ಮಟ್ಟದಲ್ಲಿ ಸಾಲ ಸೌಲಭ್ಯಗಳು ಮತ್ತು ಇತರೆ ಸೇವೆಯನ್ನು ಪಡೆಯಲು ದೇಶಾದ್ಯಂತ ಮುಂದಿನ ೫ ವರ್ಷಗಳಲ್ಲಿ ೨ ಲಕ್ಷ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ/ ಹೈನುಗಾರಿಕೆ, ಮೀನುಗಾರಿಕೆ ಸಹಕಾರ ಸಂಘವನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಕ್ರಮವನ್ನು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಸ್ವಾಗತಿಸಿದ್ದಾರೆ.
ಗುರುವಾರ ಫೆ- ೧೬ ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ದೇಶದಲ್ಲಿ ೯೮,೯೯೫ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಇದ್ದು ೧೩ ಕೋಟಿ ಸದಸ್ಯರನ್ನು ಹೊಂದಿದೆ. ೧,೯೯,೧೮೨ ಪ್ರಾಥಮಿಕ ಡೈರಿ ಸಹಕಾರಿ ಸಂಘಗಳು ಇದ್ದು ೧.೫ ಕೋಟಿ ಸದಸ್ಯರನ್ನು ಹೊಂದಿದೆ. ೨೫,೨೯೭ ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳು ಇದ್ದು ೩೩ ಲಕ್ಷ ಸದಸ್ಯರನ್ನು ಹೊಂದಿದೆ ಎಂದರು.
ದೇಶದಲ್ಲಿ ೧.೬ ಲಕ್ಷ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳು ಇಲ್ಲ ಮತ್ತು ೨ ಲಕ್ಷ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಹೈನುಗಾರಿಕೆ ಸಹಕಾರಿ ಸಂಘಗಳು ಇಲ್ಲ ಈ ಹಿನ್ನೆಲೆಯಲ್ಲಿ ಪ್ರತಿ ಪಂಚಾಯತಿಗೆ ಒಂದರಂತೆ ಸಂಘವನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ ಹಾಗೂ ಹೊಸ ಸಹಕಾರಿ ಸಂಘಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪನೆಯಾಗುವ ಕೃಷಿ ಕ್ರೆಡಿಟ್ ಸೊಸೈಟಿಗಳು ರೈತರಿಗೆ ಸಣ್ಣಪುಟ್ಟ ಹಣಕಾಸಿನ ಅಗತ್ಯಗಳನ್ನು ಸುಲಭವಾಗಿ ಪೂರೈಸುವ ಮೂಲಕ ಕೃಷಿ ಸಾಲ ನೀಡಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟು ಮಾಡುವ ಸಾಧ್ಯತೆ ಇದೆ ಎಂದರಲ್ಲದೇ ಸಹಕಾರಿ ಸಂಸ್ಥೆಗಳನ್ನು ಬಲಗೊಳಿಸುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಎಂದರು.
ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ತೆಗೆದುಕೊಂಡ ಐತಿಹಾಸಿಕ ನಿರ್ಧಾರದಿಂದ ರೈತರ ಮೊಗದಲ್ಲಿ ಮಂದಹಾಸ ತಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರನ್ನು ರಾಜ್ಯದ ರೈತರ ಪರವಾಗಿ ಅಭಿನಂದಿಸಲಾಗುವುದು ಎಂದರು.