ಸಿಂದಗಿ: ವಿಜಯಪುರ ಜಿಲ್ಲೆಯ ಎಂಟು ಮತಕ್ಷೇತ್ರದ ಪೈಕಿ ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಗೌರಮ್ಮ ಮುತ್ತತ್ತಿ, ಹಾಗೂ ಮಾಜಿ ಜಿ. ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೇಟ್ ಆಕಾಂಕ್ಷಿಗಳಾಗಿದ್ದು ಕಾಂಗ್ರೆಸ್ ಪಕ್ಷ ಅವರನ್ನು ಕಡೆಗಣಿಸಿದ್ದು ಖಂಡನೀಯ ಎಂದು ಕುರುಬ ಸಮಾಜದ ಮುಖಂಡ ರವಿಕಾಂತ್ ನಾಯ್ಕೋಡಿ ಹೇಳಿದರು.
ಪಟ್ಟಣದ ಹೆಗ್ಗೆರೆಶ್ವರ ದೇವಸ್ಥಾನದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಸೋಮವಾರ ಕರೆಯಲಾದ ಕುರುಬ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ನಾಯಕರು ಹಾಗೂ ಕೆಲವು ರಾಜ್ಯ ನಾಯಕರು ಚುನಾವಣೆ ಬಂದಾಗ ಮಾಸ್ ಲೀಡರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಹೇಳುತ್ತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅದು ನೇರವಾಗಿ ಸಿದ್ದರಾಮಯ್ಯನವರಿಗೆ ಹಾಕಿದ ಹಾಗೆ ಇದು ನಮ್ಮ ಚುನಾವಣೆ ಅಲ್ಲ ಸಿದ್ದರಾಮಯ್ಯನವರ ಚುನಾವಣೆ ಎಂದು ಹೇಳಿ ಕುರುಬ ಸಮಾಜದ ಮುಗ್ದ ಮನಸ್ಸಿನ ಮತದಾರರಿಗೆ ತಪ್ಪು ಸಂದೇಶವನ್ನು ನೀಡಿ ಮತ ಸೆಳೆಯುವ ಹುನ್ನಾರ ಮಾಡಿಕೊಂಡಿದ್ದಾರೆ, ಹಾಲುಮತ ಸಮಾಜದವರು ಜಿಲ್ಲೆಯಲ್ಲಿ ಲಕ್ಷಾಂತರ ಮತದಾರರಿದ್ದು ಕಣ್ಣು ಮುಚ್ಚಾಲೆ ಆಟ ಆಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಕೆಲವೇ ದಿನಗಳು ಮಾತ್ರ ಬಾಕಿ ಇದೆ ಸಮಾಜದ ಹಿರಿಯರು ಯುವಕರು 2023 ರ ಚುನಾವಣೆಯಲ್ಲಿ ಎಚ್ಛೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಹಳ್ಳಿ ಹಳ್ಳಿಗಳಲ್ಲಿ ಕುರುಬರ ವೇದಿಕೆ ಸಜ್ಜಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಸಿಂದಗಿ ತಾಲೂಕ ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ್, ಮುಖಂಡರುಗಳಾದ ಸಿದ್ದು ಬುಳ್ಳ, ಮಲ್ಲಿಕಾರ್ಜುನ ಸಾವಳಸಂಗ, ನಿಂಗಣ್ಣ ಬುಳ್ಳ, ದತ್ತು ಎಡಗಿ, ಶಿವು ಗಾಣಿಯಾರ್, ಎಸ್, ಪಿ, ಪೂಜಾರಿ, ಸಿದ್ದು ಬೀರಗೊಂಡ,ಲಕ್ಶ್ಮಣ ಜೇವರ್ಗಿ, ಪಿಂಟು ಮಾರಸನಳ್ಳಿ, ಲಕ್ಶ್ಮಣ ಹೂಗಾರ, ಕಲ್ಯಾಣಪ್ಪ ಪೂಜಾರಿ, ಸೇರಿದಂತೆ ಸಮಾಜದ ಯುವಕರು ಹಿರಿಯರು ಇದ್ದರು.