ಸಿಂದಗಿ; ಭಾರತದ ಸಂವಿಧಾನವು ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ 448 ವಿಧಿಗಳು 12 ಪರಿಚ್ಚೇದಗಳು 101 ತಿದ್ದುಪಡಿಗಳನ್ನು ಹೊಂದಿರುವ ಸಂವಿಧಾನ ಜನವರಿ 26 1950ರಂದು ಇದನ್ನು ಜಾರಿಗೆ ತರಲಾಯಿತು, ಆ ದಿನವನ್ನು ಗಣರಾಜ್ಯ ದಿನವನ್ನಾಗಿ ಘೋಷಿಸಲಾಗಿದೆ ಎಂದು ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ,ಎ, ಸಿಂದಗಿಕರ್ ಹೇಳಿದರು.
ಪಟ್ಟಣದ ದಲಿತ ಸೇನೆಯ ತಾಲ್ಲೂಕಾ ಕಾರ್ಯಾಲಯದಲ್ಲಿ ಪ್ರಜಾಪ್ರಭುತ್ವದ ಜನಕ ವಿಶ್ವರತ್ನ ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ ಅಂಬೇಡ್ಕರ ರವರು ಬರೆದಿರುವ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಂವಿಧಾನದ ಪೀಠಿಕೆಯನ್ನು ಓದುವದರ ಮೂಲಕ ಆಚರಿಸಿ ಮಾತನಾಡಿ, ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರು ಸಹ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ಜನಾಂಗದ ಹೆಣ್ಣುಮಕ್ಕಳ ಮೇಲೆ ಶೋಷಣೆ ದೌರ್ಜನ್ಯ, ಅಸ್ಪೃಶ್ಯತೆ, ಅತ್ಯಾಚಾರ ಇನ್ನೂ ತಪ್ಪಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ವಿಫಲವಾಗಿದೆ ಮೀಸಲಾತಿ ನೀಡುವಲ್ಲಿ ತಾರತಮ್ಯವೆಸಗಿ ಸಂವಿಧಾನವನ್ನೆ ಬುಡಮೇಲು ಮಾಡಲು ಹೊರಟಿರುವ ನೀತಿಗೆ ಧಿಕ್ಕಾರ ವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ರಜತ ತಾಂಬೆ ಮಾತನಾಡಿ, ಸರ್ಕಾರ ಸಂವಿಧಾನ ಸಮರ್ಪಣಾ ದಿನದ ನಿಮಿತ್ತವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನೆ ವೇಳೆ ಸಂವಿಧಾನದ ಪೀಠಿಕೆಯನ್ನು ಗಟ್ಟಿಯಾಗಿ ಅರ್ಥ ಶಬ್ದವಾಗಿ ಮಕ್ಕಳಿಗೆ ತಿಳಿಯುವಂತೆ ಓದಲು ಸರ್ಕಾರ ಆದೇಶ ಮಾಡಲಾಗಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಈ ಆದೇಶವನ್ನು ಪಾಲನೆ ಮಾಡುವದಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪ್ರಾರ್ಥನೆ ವೇಳೆ ಸಂವಿಧಾನ ಪೀಠಿಕೆ ಓದಲು ಕಡ್ಡಾಯವಾಗಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ದಲಿತ ಸೇನೆ ತಾಲ್ಲೂಕಾ ಅಧ್ಯಕ್ಷ ಬಾಲಕೃಷ್ಣ ಛಲವಾದಿ ಮಾತನಾಡಿ, ನಾವು ಆಗಷ್ಟ 15ರಂದು ಸ್ವಾತಂತ್ರ್ಯ ಲಭಿಸಿದ ದಿನವೆಂದು ದೇಶದೆಲ್ಲೆಡೆ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಆದರೆ ಜನವರಿ 26ರಂದು ಭಾರತ ದೇಶಕ್ಕೆ ಸಂವಿಧಾನ ಜಾರಿಯಾದ ದಿನ ಆದರೆ ಆ ದಿನವನ್ನು ಗಣರಾಜ್ಯೋತ್ಸವ ದಿನವೆಂದು ಆಚರಿಸಲು ಸನ್ನದ್ಧರಾಗಿದ್ದೇವೆ ಯಾಕೆ? ಸಂವಿಧಾನ ದಿನಾಚರಣೆಯ ದಿನವೆಂದು ಆಚರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ದಲ್ಲಿ ದಲಿತ ಸೇನೆ ಯುವ ಅಧ್ಯಕ್ಷ ಸಲೀಮ್ ಜಮಾದಾರ, ನಗರ ಘಟಕ ಅಧ್ಯಕ್ಷ ದಸ್ತಗಿರ ಆಳಂದ, ಅರ್ಜುನ ಜಾಬಾನುರ, ಸೈಯ್ಯದ್ ಕರ್ಜಗಿ, ಆಲೀಮ್ ಗುಂದಗಿ, ಜಾವಿದ ಕರ್ಜಗಿ ಉಪಸ್ಥಿತರಿದ್ದರು.