Cyber Crime: ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಜಾಗೃತಿ

Must Read

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ‌ಜಾಗೃತಿ ಕಾರ್ಯಗಳ ಮೂಲಕ ತಡೆಗಟ್ಟಲು ಪೋಲಿಸ್ ಇಲಾಖೆ ಸೇರಿದಂತೆ ಮಾಧ್ಯಮ, ಬ್ಯಾಂಕುಗಳು, ವಿವಿಧ ಸಂಪರ್ಕ ಸಾಧನ ಕಂಪನಿ, ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ.

ಇಲ್ಲೋರ್ವ ಪೋಲಿಸ್ ಕಾನ್ಸ್‌ಟೇಬಲ್ ತಮ್ಮ ಮಗನ ನಾಮಕರಣ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ತುರ್ತುಪರಿಸ್ಥಿತಿ, ಮಕ್ಕಳ ಸಹಾಯ ವಾಣಿ ಹಾಗೂ ಕಳೆದು ಹೋದ ಮೊಬೈಲ್ ಗಳ ದುರ್ಬಳಕೆ ತಡೆಯುವ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ಇವರೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಪೋಲಿಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ಎಂ.ಎಸ್.ನಾರಾಯಣರವರು. 

ಇವರು ಮೂಲತಃ ಹಾವೇರಿ ಜಿಲ್ಲೆಯ ತಿಲವಳ್ಳಿ ಗ್ರಾಮದವರು. ಎಮ್.ಎ. ಬಿ,ಇಡಿ. ಡಿ.ಇಡಿ. ಹಾಗೂ ನಾಟಕ ಕಲೆಯಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಸುಮಾರು 5 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕಳೆದ 5 ವರ್ಷಗಳಿಂದ ಪೋಲಿಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಂಗ ಕಲಾವಿದರಾದ ಇವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ನಾಟಕಗಳಲ್ಲಿ ಅಭಿನಯವನ್ನು ಮಾಡಿದ್ದಾರೆ. ಇವರ ಕಲಾ ಸೇವೆಗೆ ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. 

ಪೋಲಿಸ್ ಇಲಾಖೆಯ ತರಬೇತಿ ಅವಧಿಯಲ್ಲಿ ಗೃಹಮಂತ್ರಿಗಳಿಂದ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೋಲಿಸ್ ಇಲಾಖೆಯಂತಹ  ಬಿಡುವಿಲ್ಲದ ಇಲಾಖೆಯಲ್ಲಿದ್ದುಕೊಂಡು ಖಾಸಗಿ ಬದುಕಿನ ಕಾರ್ಯಕ್ರಮದಲ್ಲಿಯೂ ಕೂಡ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಮುಂದಾಗಿರುವ ಕಾನ್ಸ್‌ಟೇಬಲ್ ಎಮ್.ಎಸ್.  ನಾರಾಯಣ ಅವರ ಜನಪರ ಕಾಳಜಿಯನ್ನು ಪೋಲಿಸ್ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದಾರೆ.


ವರದಿ: ಸುಧೀರ್ ನಾಯರ್

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group