ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ: ೦೧.೦೧.೨೦೨೪ (ಸೋಮವಾರ)ದಂದು ಬೆಳಿಗ್ಗೆ ೦೪.೦೦ ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿದ ವಿಶೇಷ, ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಪರಮ ಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.
ಪ್ರಾರಂಭದಲ್ಲಿ ಅಂದರೆ ೧೯೯೪ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (೨೦೦) ಗ್ರಾಂ ತೂಕದ (೧೫,೦೦೦) ಲಡ್ಡುಗಳು ಹಾಗೂ (೧೫೦) ಗ್ರಾಂ ತೂಕದ (೨ ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು.
ಲಡ್ಡು ಪ್ರಸಾದವನ್ನು ವಿಶೇಷವಾಗಿ ೬೦ ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ದಿನಾಂಕ: ೨೦.೧೨.೨೦೨೩ ರಿಂದ ಪ್ರಾರಂಭಿಸಿ ೩೧.೧೨.೨೦೨೩ ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯುತ್ತದೆ.
ಉದ್ದೇಶ:
ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ದೇವಾಲಯದ ಸಂಸ್ಥಾಪಕರಾದ ಪರಮ ಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಎಲ್ಲಾ ಭಕ್ತಾದಿಗಳ ನೆರವಿನಿಂದ ಮತ್ತು ಸಂಪೂರ್ಣ ಸಹಕಾರದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತಾಧಿಕಾರಿ ಎನ್. ಶ್ರೀನಿವಾಸನ್“ಸುದರ್ಶನ ನಾರಸಿಂಹ ಕ್ಷೇತ್ರ“, ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನವಿಜಯನಗರ, ಒಂದನೇ ಹಂತ, ಮೈಸೂರು -೫೭೦೦೧೭, ಮೊಬೈಲ್ : ೦೯೯೦೦೪೦೦೦೦೦ ತಿಳಿಸಿರುತ್ತಾರೆ