ಡಾ. ಡಿ. ಸಿ. ಪಾವಟೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ರಾಯಭಾರಿ- ಡಾ. ಸೋಮಶೇಖರ ಹಲಸಗಿ ಅಭಿಮತ

Must Read

ಬೆಳಗಾವಿ: ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಗಟ್ಟಿಗೊಳ್ಳಲು ಮತ್ತು ಉನ್ನತ ಶಿಕ್ಷಣ  ಗುಣಮಟ್ಟವನ್ನು ದಕ್ಷ ರೀತಿಯಿಂದ ಬೆಳೆಸಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿಯಾಗಿ ಬೆಳೆಸುವುದರ ಜೊತೆಗೆ ಉತ್ತರ ಕರ್ನಾಟಕದ ಭಾಗಕ್ಕೆ ಶಿಕ್ಷಣದಲ್ಲಿ ನ್ಯಾಯ ಒದಗಿಸುವಲ್ಲಿ ಡಾ. ಡಿ. ಸಿ. ಪಾವಟೆಯವರ ಶ್ರಮ ಆಗಾಧವಾದದ್ದು ಎಂದು ಶಿಕ್ಷಕರು ಸಾಹಿತಿಗಳು ಮತ್ತು ನಿಕಟ ಪೂರ್ವ ಕಿತ್ತೂರು ತಾಲೂಕ ಕ.ಸಾ.ಪ ಅಧ್ಯಕ್ಷರಾದ ಡಾ. ಸೋಮಶೇಖರ ಹಲಸಗಿ ಹೇಳಿದರು.

ರವಿವಾರ ದಿ.೨0 ರಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಕ. ಸಾ. ಪ.ಜಿಲ್ಲಾ ಘಟಕ ಬೆಳಗಾವಿ ಮತ್ತು ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲೆಯ ‘ಶತಮಾನ ಕಂಡ ಸಾಹಿತಿಗಳು’ ಸರಣಿ ಮಾಲಿಕೆಯ ೨ನೇ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಕಾಕ ತಾಲೂಕಿನ ಮಮದಾಪುರದ  ಡಾ. ಪಾವಟೆಯವರು ಗಣಿತಶಾಸ್ತ್ರದಲ್ಲಿ ಅಗಾಧ ಜ್ಞಾನವನ್ನು ಹೊಂದಿ ಬ್ರಿಟಿಷರಿಂದಲೂ ಸೈ ಎನಿಸಿಕೊಂಡು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ದಕ್ಷ ರೀತಿಯಿಂದ ಕಾರ್ಯನಿರ್ವಹಿಸಿ ಇಡೀ ರಾಜ್ಯದಲ್ಲಿಯೇ ಮಾದರಿಯಾದ ವಿಶ್ವವಿದ್ಯಾಲಯವನ್ನಾಗಿಸಿದರು. ದೂರ ದೃಷ್ಟಿ ಹೊಂದಿದ್ದ ಅವರು ನಿವೃತ್ತಿ ನಂತರ ಪಂಜಾಬ್ ನ ರಾಜ್ಯಪಾಲರಾಗಿ ರಾಜಕೀಯವಾಗಿಯೂ ಮುತ್ಸದ್ದಿತನದಿಂದ ಸೇವೆ ಸಲ್ಲಿಸಿ ಚಂಡಿಘಡ  ವಿಶ್ವವಿದ್ಯಾಲಯವನ್ನು ನಿರ್ಮಿಸಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. ಇಂತಹ ದೂರದೃಷ್ಟಿ ಅಪಾರ ಅನುಭವದ ಪ್ರಾಮಾಣಿಕ ಆಡಳಿತಗಾರರು ಬೆಳಗಾವಿ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ ಆ ನಿಟ್ಟಿನಲ್ಲಿ ಅವರ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಈಗಲೂ  ಅನುಸರಿಸುತ್ತಾ ಶೈಕ್ಷಣಿಕವಾಗಿ ನಾವೆಲ್ಲ ಮುನ್ನಡೆಯಬೇಕಿದೆ ಎಂದರು. 

ಜಿಲ್ಲಾ ಕಾರ್ಯದರ್ಶಿ ಎಮ್ ವೈ ಮೆಣಸಿನಕಾಯಿ ಮಾತನಾಡಿ, ಸಾಹಿತ್ಯ ಕ್ಷೇತ್ರವನ್ನು ಬೆಳೆಸಿದ ಜಿಲ್ಲೆಯ ಹಿರಿಯ ಜೀವಿಗಳನ್ನು ಅವರ ಸಾಹಿತ್ಯ ಸೇವೆಯನ್ನು ನೆನೆಯುವ ಈ ಶತಮಾನ ಕಂಡ ಸಾಹಿತಿಗಳು ಕಾರ್ಯಕ್ರಮ ರಾಜ್ಯದಲ್ಲಿಯೇ ವಿಶಿಷ್ಟವಾಗಿದ್ದು ಮುಂಬರುವ ಪೀಳಿಗೆಗೆ ಹಿರಿಯ ಜೀವಿಗಳ ನೆನಪುಗಳು ದಾರಿದೀಪವಾಗುವವು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಶಿವಯೋಗಿ ಕುಸುಗಲ್ ಮಾತನಾಡಿ, ಸಾಹಿತ್ಯವನ್ನು ಜನಪದ ಕಲೆ ಉಳಿಸಿಕೊಂಡು ಬೆಳೆಸುವುದರ ಜೊತೆಗೆ ಸಂಸ್ಕಾರವನ್ನು ಮುಂಬರುವ ಪೀಳಿಗೆಗೆ ತುಂಬಬೇಕಿದೆ. ‘ನಮ್ಮೂರು ನಮ್ಮ ಹೆಮ್ಮೆ ಅಭಿಮಾನ’ ಎನ್ನುವ ರೀತಿಯಲ್ಲಿ  ನಮ್ಮತನದ ಅಭಿಮಾನ ಹೆಚ್ಚಿಸಿ ಕಲೆ ಸಾಹಿತ್ಯ ಸಂಸ್ಕೃತಿ ಬೆಳೆಸುವ ನಮ್ಮವರನ್ನು ನೆನಪಿಸಿಕೊಳ್ಳೋಣ ಎಂದರು. ಕಾರ್ಯಕ್ರಮದಲ್ಲಿ ಕ. ಸಾ. ಪ ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ,ಮಲ್ಲಿಕಾರ್ಜುನ ಕನಶೆಟ್ಟಿ, ಎಸ್. ನಂಜುಂಡಪ್ಪ,ಸ.ರಾ ಸುಳಕೂಡೆ, ಬಿ.ಬಿ ಮಠಪತಿ, ಡಾ. ಕವಿತಾ ಕುಸುಗಲ್, ಡಾ.ಬಿ. ವೈ. ನಾಯಿಕ,ಡಾ. ಸಂಗೀತಾ ಕುಸುಗಲ್, ಜಿ. ಎಸ್. ಹಲಸಗಿ, ಡಾ.ಆನಂದ ರಣಗಟ್ಟಿಮಠ,ಬಿ.ಎಸ್. ದೊಡಭಂಗಿ, ಜಿ. ಎಸ್. ಬೊಂಬ್ರಿ, ರಾಜೇಂದ್ರ ಪಾವಟೆ ,ಉಪಸ್ಥಿತರಿದ್ದರು. 

ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಸುನೀಲ ಹಲವಾಯಿ ಸ್ವಾಗತಿಸಿ ಪರಿಚಯಿಸಿದರು. ಸಹ ಕಾರ್ಯದರ್ಶಿ ಶಿವಾನಂದ ತಲ್ಲೂರ ನಿರೂಪಿಸಿದರು ವೀರಭದ್ರ ಅಂಗಡಿ ವಂದಿಸಿದರು.

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group