ಸಿಂದಗಿ – ವಿದ್ಯುತ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ರೈತರು, ಗ್ರಾಮೀಣ ಪ್ರದೇಶದ ಜನರು ಹಾಗೂ ನಗರದ ಜನತೆ ಎದುರಿಸಬಾರದು ಎಂದು ಸಿಂದಗಿ ವಿದ್ಯುತ್ ಇಲಾಖೆಯ ಅಡಿಯಲ್ಲಿ ಗ್ರಾಹಕರ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ವಿದ್ಯುತ್ ಇಲಾಖೆಯ (ಹೆಸ್ಕಾಂ) ಆವರಣದಲ್ಲಿ ನೂತನವಾಗಿ ಆಯ್ಕೆಗೊಂಡಿರುವ ಸಲಹಾ ಸಮಿತಿಯ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.
ಹುಬ್ಬಳ್ಳಿ ಹೆಸ್ಕಾಂ ವಿಭಾಗದಲ್ಲಿಯೇ ಮೊದಲ ಬಾರಿಗೆ ಗ್ರಾಹಕರ ಸಲಹಾ ಸಮಿತಿಯನ್ನ ರಚನೆ ಮಾಡಿದ ಕೀರ್ತಿ ಸಿಂದಗಿ ಮತಕ್ಷೇತ್ರಕ್ಕೆ ಸಲ್ಲುತ್ತದೆ. ಸಿಂದಗಿ ಉಪ ವಿಭಾಗ, ಸಿಂದಗಿ ನಗರ, ಸಿಂದಗಿ ಗ್ರಾಮೀಣ, ದೇವಣಗಾಂವ ಶಾಖೆ, ಗೋಲಗೇರಿ ಶಾಖೆ, ಆಲಮೇಲ ಶಾಖೆ ಮತ್ತು ಮೋರಟಗಿ ಶಾಖೆ ಸೇರಿದಂತೆ ಸುಮಾರು 35 ಸದಸ್ಯರುಳ್ಳ 7 ಗ್ರಾಹಕರ ಸಲಹಾ ಸಮಿತಿಯನ್ನು ರಚನೆ ಮಾಡಿದೆ. ಸಮಿತಿಯ ಸದಸ್ಯರು ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ವಿದ್ಯುತ್ತಿನ ಯಾವುದೇ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಬೇಕು. ಮತಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆಗೆ ಕೂಡಲೇ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸಾರ್ವಜನಿಕರಿಗೆ ಹೊಸ ಆಯಾಮವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಸಿಂದಗಿ ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ್ ನಾಯಕ್ ಮಾತನಾಡಿ, ಸಿಂದಗಿ ಉಪ ವಿಭಾಗದಿಂದ ವಿದ್ಯುತ್ ಗೆ ಸಂಬಂಧಿಸಿದಂತೆ ಅನೇಕ ಕಾರ್ಯ ಯೋಜನೆಗಳು ನಡೆಯುತ್ತಿವೆ ಇಲಾಖೆಗೆ ಗ್ರಾಹಕರ ಸಹಭಾಗಿತ್ವ ಅವಶ್ಯಕತೆಯಾಗಿದೆ ಎಂದರು.
ನಂತರ ಶಾಸಕ ಅಶೋಕ ಮನಗೂಳಿ ಅವರು ಗ್ರಾಹಕರ ಸಲಹಾ ಸಮಿತಿಗೆ ಆಯ್ಕೆಗೊಂಡಿರುವ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬಸವರಾಜ ಯರನಾಳ, ಚಂದ್ರಶೇಖರ್ ದೇವರೆಡ್ಡಿ, ಸಲೀಂ ಕಣ್ಣಿ, ನೂರಅಹಮದ ಅತ್ತಾರ, ಸುನಂದಾ ಯಂಪೂರೆ ಸೇರಿದಂತೆ ಅನೇಕರು ಇದ್ದರು.