ಬಯಲು ವಿಶ್ವವಿದ್ಯಾಲಯದ ಜೀವಂತಜ್ಯೋತಿ ಜಾನಪದರು

Must Read

‘ನೆಲಸಂಸ್ಕೃತಿಯನ್ನು ಕಾಲಾನುಕಾಲದಿಂದಲೂ ತಮ್ಮ ಅಗಾಧವಾದ ಅನುಭವ, ಅರಿವು ಹಾಗೂ ಕಾರುಣ್ಯಗಳಿಂದ ಕಟ್ಟಿಕೊಂಡು ಬಂದ ಬಯಲು ವಿಶ್ವವಿದ್ಯಾಲಯದ ಜೀವಂತಜ್ಯೋತಿಗಳು ಜಾನಪದರು’ ಎಂದು ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯಪಟ್ಟರು.

ಮಾಲೂರಿನ ಸಮತಾನಗರದ ಸಾರಂಗರಂಗ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಾವಿರಾರು ವರ್ಷಗಳಿಂದ ಈ ನೆಲದ ಮಣ್ಣಿನ ಮಕ್ಕಳು ತಮ್ಮ ನಡೆ-ನುಡಿಗಳಲ್ಲಿ ಜಾನಪದ ಸಂಪತ್ತನ್ನು ಕಾಪಿಟ್ಟುಕೊಂಡು ಬರುತ್ತಿದ್ದಾರೆ. ಜಾನಪದರ ಬದುಕು ಮತ್ತು ಕಲೆಗಳು ಒಂದರೊಳಗೊಂದು ಬೇರೂರಿಕೊಂಡಿರುವ ಕಾರಣದಿಂದಾಗಿ ಜಾನಪದ ಜಗತ್ತಿಗೆ ಮಹೋನ್ನತವಾದ ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆಗಳು ಪ್ರಾಪ್ತವಾಗಿವೆ ಎಂದರು.

ಪೂರ್ವಕಾಲೀನ ಕನ್ನಡ ಕವಿಯಾದ ಕವಿರಾಜಮಾರ್ಗಕಾರನು ಈ ನಾಡಿನ ಜಾನಪದರ ಜಾಣ್ಮೆ ಮತ್ತು ಬಲ್ಮೆಯನ್ನು ಕುರಿತು ಹೆಮ್ಮೆಯಿಂದ ದಾಖಲಿಸಿದ್ದಾನೆ. ಹದವನ್ನರಿತು ನುಡಿಯುವ, ನುಡಿದುದನ್ನು ಅರಿತು ಅರ್ಥೈಸುವ ಈ ನಾಡಿನ ಜನರು ಚತುರತೆಯುಳ್ಳವರು, ನಿಜವಾಗಿಯೂ ಕುರಿತೋದದೆಯುಂ ಕಾವ್ಯಪ್ರಯೋಗ ಮಾಡುವ ಪರಿಣತಮತಿಗಳಾಗಿದ್ದರು ಎಂದಿರುವುದು ಸಾಕ್ಷಾತ್ತು ಈ ಜಾನಪದ ಲೋಕವನ್ನು ಕುರಿತದ್ದೇ ಆಗಿದೆ. ಜಾನಪದವೇ ಜಗತ್ತಿನ ಸರ್ವಸಂಸ್ಕೃತಿಗಳ ತಾಯಿಬೇರಾಗಿದೆ. ಆಧುನಿಕ ತಂತ್ರಜ್ಞಾನ ಯುಗದವರೆಂದು ಬೀಗುವ ನಾವು ನಮ್ಮೆಲ್ಲರ ಹೃದಯಗಳಲ್ಲಿ ಇಂತಹ ಜಾನಪದ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಪೋಷಿಸಬೇಕಾಗಿದೆ ಎಂದು ತಿಳಿಸಿದರು.

ಜಾನಪದ ಕಲೆಗಳಲ್ಲಿ ಮುಖವೀಣೆ ವಾದನಕ್ಕೆ ತನ್ನದೇ ಆದ ವಿಶೇಷತೆ ಇದೆ. ಏಕಕಾಲದಲ್ಲಿ ಮೂರು ವಾದ್ಯಗಳನ್ನು ಬಾಯಿಯಲ್ಲಿಟ್ಟುಕೊಂಡು ನಾದ ಹೊಮ್ಮಿಸುವುದು ಸವಾಲೇ ಸರಿ. ಅಪಾರವಾದ ಶ್ರದ್ಧೆಯನ್ನು ಬೇಡುವ ಬಹುನಾದಗಳ ಕೂಡಲಸಂಗಮದಂಥ ಕಲೆಯಿದು. ಇದರಲ್ಲಿ ಸಿದ್ಧಿ ಪಡೆದಿರುವ ಮಹಾಸಾಧಕರಲ್ಲಿ ಮುಖವೀಣೆ ಆಂಜಿನಪ್ಪ ಅವರು ಪ್ರಸಿದ್ಧರಾಗಿದ್ದಾರೆ. ಬಾಯಿಯಿಂದ ಮತ್ತು ಬಾಯಿಯಷ್ಟೇ ಪರಿಣಾಮಕಾರಿಯಾಗಿ ಮೂಗಿನ ಮೂಲಕವೂ ಮುಖವೀಣೆ ನುಡಿಸುವ ಅಪರೂಪದ ಶ್ರೇಷ್ಠ ಕಲಾಜೀವಿಯಿವರು. ಮುಖವೀಣೆ ವಾದನದ ಸಿದ್ಧಿ-ಸಾಧನೆಯಲ್ಲಿ ಆಂಜಿನಪ್ಪನವರು ನೆಲದವ್ವನ ವರಪುತ್ರರಂತೆ ಕಾಣುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕೋಲಾರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮೀ ಅವರು ಮಾತನಾಡಿ, ನಮ್ಮ ಹಿರಿಯರು ಕಾಲಾನುಕಾಲದಿಂದಲೂ ಅಭಿವ್ಯಕ್ತಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಸಮಾರಂಭದಲ್ಲಿ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಮುಖವೀಣೆ ಆಂಜಿನಪ್ಪ ಅವರು ಚೆಲ್ಲಿದರೂ ಮಲ್ಲಿಗೆಯಾ, ಮಾದೇಶ್ವರ ದಯೆಬಾರದೇ, ಭಾಗ್ಯದ ಲಕ್ಷ್ಮೀ ಬಾರಮ್ಮ, ಕರೆದರೂ ಕೇಳದೆ, ಶಂಕರಾಭರಣಂ ಮೊದಲಾದ ಹಾಡುಗಳನ್ನು ಮುಖವೀಣೆಯ ಮೂಲಕ ಆಕರ್ಷಕವಾಗಿ ಪ್ರಸ್ತುತಪಡಿಸಿದರು. ತದನಂತರ ಕಲಾವಿದರಾದ ಚಿಂತಾಮಣಿ ಮುನಿರೆಡ್ಡಿ ಮತ್ತು ತಂಡ ಹಾಗೂ ಕೊಂಡ್ಲಿಗಾನಹಳ್ಳಿ ನರಸಿಂಹಪ್ಪ ಅವರಿಂದ ‘ದೇಸಿಂಗ ರಾಜನ ಕಥೆ’ ಎಂಬ ಕೇಳಿಕೆ (ನಾಟಕ) ಪ್ರದರ್ಶನಗೊಂಡಿತು.

ಸಾರಂಗರಂಗ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕರಾದ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್., ಕಲಾವಿದರಾದ ಹರೀಶ್, ಗಾಯಕರಾದ ಚಿನ್ನಯ್ಯ, ಕವಿಗಳಾದ ಡಾ.ನಾ.ಮುನಿರಾಜು ಮೊದಲಾದವರು ಇದ್ದರು.

Latest News

ಮಠಗಳು ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳು : ಶ್ರೀ ರಂಭಾಪುರಿ ಜಗದ್ಗುರುಗಳು

ಸಿಂದಗಿ; ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಮತ್ತು ಶಾಂತಿಗೆ ಧರ್ಮ ಪರಿಪಾಲನೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ...

More Articles Like This

error: Content is protected !!
Join WhatsApp Group