ನೀ ಒಂದು ಸಾರಿ ನನ್ನ ಮನ್ನಿಸು

Must Read

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

ನನ್ನೊಲವೆ,

ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು ಸಾಲು ಸಾಲು ಮುತ್ತಿಕ್ಕಿದರೆ ಸಾಕು. ಹೃದಯದಲ್ಲಿ ನೀ ಮಾಡಿದ ಆಳವಾದ ಗಾಯ ಮಾಯ. ಹರಿಯುವ ನೀರಿನಂತೆ ಸುಡುವ ಬೆಂಕಿಯಂತೆ ಅರಳಿದ ಪ್ರೀತಿಯನ್ನು ಬಚ್ಚಿಡುವುದು ಅಸಾಧ್ಯ. ಪ್ರೀತಿಯಲ್ಲಿ ಸಾವು ಬಂದರೂ ಲೆಕ್ಕಕ್ಕಿಲ್ಲ. ಸಾವಿನ ಭಯವೂ ನನಗಿಲ್ಲ.ಭಯದ ನೆರಳಲ್ಲಿ ಬದುಕುವುದು ಒಂದು ಬದುಕೇ? ಪ್ರೀತಿಯಿಲ್ಲದ ಜೀವನ, ಜೀವನವೂ ಅಲ್ಲ. ನೀನು ಒಲಿದಾಗ ಇಷ್ಟಿಷ್ಟೇ ಬದಲಾಗಿದ್ದೆ. ತಡೆ ಹಿಡಿದ ಮನದ ಎಲ್ಲ ಬಯಕೆಗಳನು ಮೆರವಣಿಗೆಗೆ ಸಜ್ಜುಗೊಳಿಸಿದ್ದೆ. ನಾನು ಮಾತಿನಲ್ಲಿ ಒರಟ ಎಂದು ಎಲ್ಲರಿಗೂ ಗೊತ್ತು ಆದರೆ ಹೃದಯ ಮೆತ್ತನೆಯ ಹತ್ತಿಯಂತೆ ಬಲು ಮೃದುವಾಗಿದೆ ಕಣೆ. ಕಾವ್ಯ ಸಾಲಿನಲಿ ಧುಮ್ಮಿಕ್ಕಿ ಹರಿಯುವ ಜಲಧಾರೆಯಂತೆ. ನನ್ನ ಪ್ರೀತಿಗೆ ಮನಸೋತು ನನ್ನ ಬಲಿಷ್ಠ ತೋಳುಗಳಲ್ಲಿ ನಿನ್ನ ನೀನೇ ಬಂಧಿಸಿಕೊಂಡು ಸುಖಿಸಿದ ಪರಿಯನು ಬಣ್ಣಿಸಲು ಪದಕೋಶದ ಪದಗಳು ಸಾಲವು. ನಾನು ನೀನು ಜೊತೆ ಸೇರಿ ಓಡಾಡುತ್ತಿದ್ದಾಗ ಕ್ಷಣ ಕ್ಷಣವೂ ಲವ ಲವಿಕೆ ಪುಟಿದೇಳುತ್ತಿತ್ತು. ಎದೆ ಸೇರಿದ ಹಿತಾನುಭವ ಗುಪ್ತವಾಗಿ ಇರುಳಿನಲ್ಲಿ ಎದ್ದು ನಲಿಯುತ್ತಿತ್ತು. ಅದರಲ್ಲೇ ಮೈ ಮರೆಯುತ್ತಿದ್ದೆ.

ಈಗ ನಿನ್ನ ಮುಂದೆ ನನ್ನ ಮನದ ತೊಳಲಾಟ ಹೇಳದಿದ್ದರೆ ಉಳಿಗಾಲವಿಲ್ಲವೆಂದು ಈ ಓಲೆ ಬರೆಯುತಿರುವೆ. ಪ್ರೇಮ ನಿವೇದನೆಯ ಸಂದರ್ಭದಲ್ಲಿ ನಾನು ಒರಟಾಗಿ ನಡೆದುಕೊಂಡೆ ಎಂಬುದು ನನಗೂ ಅನ್ನಿಸಿದೆ ಗೆಳತಿ. ಅಷ್ಟೊಂದು ಆಪ್ತಳಾದ ನಿನ್ನ ಮುಂದೆ ಇನ್ನೇನು ಮುಚ್ಚು ಮರೆ ಎಂದು ಹಾಗೆ ನಡೆದುಕೊಂಡೆ ಹೊರತು, ಮತ್ತೆ ಬೇರೆ ಯಾವ ಕಾರಣಗಳೂ ಇಲ್ಲ. ಪ್ರೇಮ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿ ನಡೆದದ್ದು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಿನ್ನನ್ನು ನನ್ನ ಜೀವದಂತೆ ಕಂಡ ನನಗೆ ಈ ರೀತಿ ಶಿಕ್ಷಿಸುವುದು ತರವೇ? ನೀನೇ ಪ್ರಶ್ನಿಸಿಕೋ ಗೆಳತಿ. ನನ್ನುಸಿರಲ್ಲಿ ಉಸಿರಾಗಿ ನೀನಿರುವಾಗ, ಉಸಿರಿನ ಕೊನೆಯವರೆಗೂ ಜೊತೆಯಲ್ಲೇ ಜೊತೆಗಿರುವೆ. ಈಗಷ್ಟೇ ಕಲೆತಿರುವ ನವಿರಾದ ಮನವನು ಒರಟಾದ ಮಾತುಗಳಿಂದ ಘಾಸಿಗೊಳಿಸಿರುವೆ. ನಿನ್ನೆದೆಯ ಮೃದು ಭಾವಗಳ ಸಂತೈಸಬೇಕು.ಹೃದಯಾಳದಿಂದ ಆರಾಧಿಸುವ ನಿನ್ನನು ನೆನೆದರೆ ಸಾಕು ಭಾವ ಕೋಶವೆಲ್ಲ ಬೆಚ್ಚಗಾಗುವುದು. ನೀನೇ ನಿನ್ನ ಕೈಯಾರೆ ಹೆಣೆದ ಸ್ವೆಟರ್‍ನ್ನು ನನ್ನ ಜನುಮ ದಿನದಂದು ಉಡುಗೊರೆಯಾಗಿ ನೀಡಿದೆ. ಅದರ ಮೇಲಿರುವ ಕೆಂಗುಲಾಬಿ ನನ್ನನ್ನು ಮುದ್ದಿಸಲು ಕೆದಕಿ ಕರೆಯುತ್ತದೆ. ಈ ಬಿರು ಬೇಸಿಗೆಯಲ್ಲೂ ನಿನ್ನೊಲವಿನ ಉಡುಗೊರೆ ಮೈಗಂಟಿಸಿಕೊಂಡೇ ಹೊರ ಬೀಳುವೆ. ಗೆಳೆಯರೆಲ್ಲ ಕಾಲೆಳೆದರೂ ಕಿವಿಗೊಡುವುದಿಲ್ಲ. ನೀನೇ ನನ್ನನ್ನು ಗಟ್ಟಿಯಾಗಿ ತಬ್ಬಿದ ಭಾವ ನನ್ನನ್ನು ಸಣ್ಣನೆಯ ನಶೆಗೊಳಗಾದವನಂತೆ ಆಡಿಸುತ್ತದೆ.

ಅದೊಮ್ಮೆ ಇಡೀ ದಿನ ಕಾಡು ಮೇಡು ಬೆಟ್ಟ ಗುಡ್ಡ ಕೈ ಕೈ ಹಿಡಿದು ತಿರುಗಿ ಇಬ್ಬರಿಗೂ ಸುಸ್ತಾಗಿತ್ತು. ಸುಂದರ ಹೂದೋಟದ ಪುಟ್ಟ ಗುಡಿಲಿನ ಮುಂದೆ ಸಂಜೆ ಬಾನಿನ ರಂಗಿಗೆ ಮೈ ಮರೆತಿದ್ದೆ. ಹೃದಯದಲ್ಲಿ ಅವಿತಿದ್ದ ಪ್ರೇಮವು ಕಾರ್ಮೋಡಗಳ ನಡುವೆ ಝಗ್ಗನೇ ಬೆಳಗುವ ಮಿಂಚಂತೆ ನಿನ್ನ ಕಂಗಳಲ್ಲಿ ಮಿಂಚಿದ್ದನ್ನು ಕಂಡೆ. ಜಗದ ಪ್ರೇಮವನ್ನೆಲ್ಲ ನಿನ್ನ ಹೃದಯಕ್ಕಿಳಿಸಿಹರೇನೋ ಎನ್ನುವಂತೆ ಮುಖಭಾವ. ಅಲ್ಲಿರುವ ಕಲ್ಲು ಬಂಡೆಯ ಮೇಲೆ ಸುಖಾಸೀನನಾದೆ. ನನ್ನ ಬೆರಳುಗಳನು ನವಿರಾಗಿ ಸವರಿದೆ. ಮೊದಲ ಸಲ ಇಂಥ ಒಲವ ಪರಿ ಕಂಡು ಅಚ್ಚರಿಗೊಂಡೆ. ಒಲುಮೆಯಿಂದ ನನ್ನ ಬೆನ್ನಿಗೆ ನಿನ್ನ ಎದೆಯನು ತಾಗಿಸಿದೆ. ಮೈ ನರ ನಾಡಿಗಳೆಲ್ಲ ಒಮ್ಮೆಲೇ ರೋಮಾಂಚನಗೊಂಡವು. ನನ್ನ ಭುಜದ ಮೇಲೊರಗಿ ಕೆನ್ನೆಗೆ ಮುತ್ತಿಕ್ಕಿದೆ.ಅದ್ಯಾವಾಗ ನಿನ್ನ ಕೋಮಲ ಬೆರಳುಗಳ ಸಂದುಗಳನು ನನ್ನ ಒರಟಾದ ಬೆರಳುಗಳು ತುಂಬಿದವೋ ಅರಿವಿಗೆ ಬರಲೇ ಇಲ್ಲ. ಆಲಿಂಗನದಲ್ಲಿ ತುಟಿಗೆ ತುಟಿ ಸೇರಿಸಿ ದೀರ್ಘವಾಗಿ ಚುಂಬಿಸಿದ ಹಿತ ಒಂದು ಅದ್ಭುತ ಕಾವ್ಯ ಓದಿದ ರೀತಿಯಂತಿತ್ತು. ಬಲು ಹುಮ್ಮಸ್ಸಿನಿಂದ ಕಾಮದ ಕುದುರೆಯನು ಓಡಿಸಲು ಉತ್ಸುಕನಾದೆ. ಪ್ರೇಮೋತ್ಸವದ ಸಂಭ್ರಮದಲ್ಲಿ ಮೀಯಲು ಅಣಿಯಾಗಿದ್ದೆ. ಪ್ರೀತಿಯ ಮಳೆಗರೆದು ದಾಹ ತೀರಿಸಲು ಮುಂದಾಗಿದ್ದೆ ಎಷ್ಟಾದರೂ ಹೆಣ್ಣು ಜೀವವಲ್ಲವೇ? ಬಯಲಲ್ಲಿ ಬೆತ್ತಲಾದರೆ ಮುಂದಾಗುವ ಆಗು ಹೋಗುಗಳಿಗೆ ಈ ಮಿಲನವೇ ಮುಳುವಾಗುವ ಯೋಚನೆ ಕಾಡಿದಾಕ್ಷಣ ನಿನ್ನ ನಡುವಲ್ಲಿ ಸಣ್ಣಗೆ ನಡುಕ ಶುರುವಾಯಿತು. ಗುಡಿಸಲಿನಿಂದಾಚೆ ಹೆಜ್ಜೆಯಿಟ್ಟು ಹುಲಿಯಿಂದ ತಪ್ಪಿಸಿಕೊಂಡ ಹರಿಣಿಯಂತೆ ಕಾಡನ್ನು ದಾಟಿ ಊರು ತಲುಪಿದೆ.ಅಂದಿನಿಂದ ನನ್ನ ಈ ಬದುಕಿಗೆ ಮಳೆ ಚಳಿ ಬಿಸಿಲಿನ ಲೆಕ್ಕವೇ ಇಲ್ಲ. ದೇಹ ಸಮೀಪಿಸಿದರೂ ಮನಸ್ಸು ಗೆಲ್ಲಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ.

ಅರಿಯದೇ ಮಾಡುತ್ತಿದ್ದ ತಪ್ಪಿಗೆ ತೆರೆ ಎಳೆದು ದೊಡ್ಡ ತಪ್ಪನು ತಪ್ಪಿಸಿದೆ. ನಿನಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನೀನು ನನ್ನಿಂದ ದೂರವಾದ ಮೇಲೆ ಬದುಕು ಅದೆಷ್ಟೋ ಅನುಭವಗಳನು ಹೇಳಿ ಕೊಟ್ಟಿದೆ. ಬಯಲಲ್ಲಿ ಬೆತ್ತಲೆಯ ಕೋಟೆ ಏರಿದ್ದರೆ ಬದುಕಿನ ಹಳಿ ತಪ್ಪಿ ಹೋಗುತ್ತಿತ್ತು ಎನ್ನುವ ಅರಿವು ಬಂದಿದೆ. ಹೀಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿಕೊಂಡು ನಿನಗೆ ನೀನು ಶಿಕ್ಷಿಸಿಕೊಳ್ಳದಿರು. ರಾಜ ಬೀದಿಯಲ್ಲಿ ನನ್ನ ಪಟ್ಟದ ರಾಣಿಯಾಗಿ ನಿನ್ನ ಸ್ವೀಕರಿಸುವ ಕಾಲ ಬಂದಿದೆ. ‘ನೀ ಒಂದು ಸಾರಿ ನನ್ನ ಮನ್ನಿಸು. ನನ್ನ ಮೇಲೆ ದಯೆ ತೋರಿಸು ಓ ಚಿನ್ನ ರನ್ನ ನನ್ನ ಪ್ರೀತಿಸು.’ ಎಂದು ಹಾಡುತ್ತ ಅದೇ ಗುಡಿಸಲಿನ ಮುಂದೆ ಕಾದು ಕುಳಿತಿರುವೆ. ನಮ್ಮೀರ್ವರ ಹೆತ್ತವರನೂ ಒಪ್ಪಿಸಿರುವೆ.

ನನ್ನೊಂದಿಗೆ ಜೀವನ ಪಯಣ ಬೆಳೆಸಲೋ ಬೇಡವೋ ಎನ್ನುವ ಹೊಯ್ದಾಟದಲ್ಲಿ ಬೀಳಬೇಡ. ನಿನ್ನ ಮನಸ್ಸನ್ನು ಗೆದ್ದ ಮೇಲೆಯೇ ಮೈಗೆ ಮೈ ತಾಗಿಸುವೆ ಗೆಳತಿ. ಮೋಡ, ಮಳೆ, ಹಗಲು, ರಾತ್ರಿ, ಮುಸ್ಸಂಜೆ, ಮುಂಜಾವು, ಸಾಗರ, ನದಿ, ತೊರೆ, ಹಳ್ಳ, ಕೊಳ್ಳದ ದಂಡೆಗಳು ಇನ್ನು ಮೇಲೆ ನಮ್ಮ ಪ್ರೀತಿ ತುಳುಕಾಡಿ ಹೊರಚೆಲ್ಲುವುದಕ್ಕೆ ಸಾಕ್ಷಿಯಾಗಿಸೋಣ.

ಇಂತಿ ನಿನ್ನೊಲವು

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group