ಬಾಗಲಕೋಟೆ: ಪ್ರತಿಷ್ಠಿತ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಸಂಘವು ಕಳೆದ 30 ವರ್ಷಗಳಿಂದ ಕಾರ್ಯನಿರತ ಪತ್ರಕರ್ತರ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 350ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಹೇಳಿದರು.
ಸಂಘದ ಸದಸ್ಯರಿಗೆ ವಿಜಯಪುರ ಬಿಎಲ್‌ಡಿ ಸಂಸ್ಥೆ ಯು ಹೆಲ್ತ್ ಕಾರ್ಡ್ ನೀಡಿದ್ದಾರೆ ಎಂದರು.
ಎಂ.ಎಂ.ಜೋಶಿ ಆಸ್ಪತ್ರೆಗೆ ಮರಣಾನಂತರ ನೇತ್ರದಾನ ಮಾಡಲು ತಾವು ಬಯಸಿರುವುದಾಗಿ ಮಹೇಶ ಅಂಗಡಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅಮಿನಗಡ ಪತ್ರಕರ್ತ ನರಸಿಂಹಮೂರ್ತಿ ಅವರು ನೇತ್ರದಾನ ಮಾಡಲು ಘೋಷಣೆ ಮಾಡಿದರು.
ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ನೀಡುವ ಸೇವೆಯನ್ನು ಗುರುತಿಸಿ ಬೆಂಬಲಿಸುವ ಉದ್ದೇಶದಿಂದ ಈ ರೀತಿಯ ಕಣ್ಣಿನ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ 40 ವರ್ಷ ಮೇಲ್ಪಟ್ಟವರಿಗೆ ಕನ್ನಡಕ ಅವಶ್ಯಕವಾಗುತ್ತಿದ್ದು, ಶಿಬಿರದಲ್ಲಿ ತಪಾಸಣೆ ಮಾಡಿದವರಿಗೆ ಸರ್ಚ್ ಸಂಸ್ಥೆಯ ಮೂಲಕ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತದೆ ಎಂದು ಹೇಳಿದರು.
ಟಿವಿ, ಕಂಪ್ಯೂಟರ್ ಹಾಗೂ ಮೊಬೈಲ್ ಬಳಸುವವರಿಗೆ ವಿಶೇಷ ರಿಯಾಯಿತಿ ದರದಲ್ಲಿ ಒಳ್ಳೆಯ ಲೆನ್ಸ್‌ಗಳನ್ನು ಹೊಂದಿದ ಕನ್ನಡಕ ಒದಗಿಸಲಾಗುವುದು. ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಎಂ.ಎಂ. ಜೋಶಿ ಆಸ್ಪತ್ರೆಯ ಸಂಪೂರ್ಣ ಸೌಲಭ್ಯಗಳನ್ನು ಸಹಕಾರದೊಂದಿಗೆ ಒದಗಿಸಲಾಗುತ್ತದೆ ಎಂದರು.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಉಪಕರಣಗಳಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸರ್ಚ್ ಸಂಸ್ಥೆಯ ವೆಂಕಟೇಶ ಮಾತನಾಡಿ, ಸರ್ಚ್ ಸಂಸ್ಥೆ ಕಳೆದ 30 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಎಂ.ಎಂ. ಜೋಶಿ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

