ಎಲ್ಲಾ ರೀತಿಯ ಸ್ತನ ಕಾನ್ಸರ್ ನೋವಿನಿಂದ ಕೂಡಿರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ವೇದನಾರಹಿತವಾಗಿರುತ್ತದೆ.ಕಾನ್ಸರ್ ನ ಮೊದಲನೇ ಹಂತದಲ್ಲಿ ಹೆಚ್ಚು ತೊಂದರೆ ಕಾಣಿಸದಿದ್ದರೂ ಸ್ತನದ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಲಕ್ಷಣ ಕಾಣಿಸಬಹುದು. ನೋವು ಇಲ್ಲದಿದ್ದರೂ ಸ್ತನದ ಕಾನ್ಸರ್ ಕಾಣಬಹುದು. ಸ್ತನದ ಭಾಗದಲ್ಲಿ ಉಂಟಾಗಬಹುದಾದ ಗಂಟುಗಳು ಎಲ್ಲವೂ ಕಾನ್ಸರ್ ಗೆ ಸಂಬಂಧಿಸಿರದಿದ್ದರೂ, ಅಂತಹ ಗಂಟುಗಳಾದಾಗ ತಕ್ಷಣದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೆ. ಎಲ್. ಇ. ಆಸ್ಪತ್ರೆಯ ಡಾ. ನೇಹಾ ಧಡೆದ್ ಇವರು ಅಭಿಪ್ರಾಯ ಪಟ್ಟರು.
ಕೆ. ಎಲ್. ಇ ಆಸ್ಪತ್ರೆಯ ಸಹಯೋಗದೊಂದಿಗೆ ವೇದಾಂತ ಫೌಂಡೇಶನ್ ವತಿಯಿಂದ ರಾಧಾಸ್ವಾಮಿ ಸತ್ಸಂಗ, ನಿರ್ಮಲನಗರ, ಮೊದಗಾ ಇಲ್ಲಿ ಸ್ತನ ಕಾನ್ಸರ್ ಮತ್ತು ಚಿಕಿತ್ಸೆ ಮಾತ್ರವಲ್ಲದೆ ಇತರ ಎಲ್ಲಾ ರೋಗಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದೋಪಚಾರಕ್ಕಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಡಾ. ಪ್ರೀತಿ ಹಜಾರೆ ಯವರು ಅಲ್ಪಾವಧಿಯಲ್ಲಿಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹತ್ತರವಾದ ಸಾಧನೆಯನ್ನು ಮಾಡಿದ ವೇದಾಂತ ಫೌಂಡೇಶನ್ ನ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದೆ, ಇಂತಹ ಶಿಬಿರದ ಆಯೋಜನೆ ಮಾಡಿದ ಈ ಫೌಂಡೇಶನ್ ಗೆ ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿರಾವ್ ಕೇದನೂರ್ಕಾರ್ ಹಾಗೂ ಮುಖ್ಯ ಅತಿಥಿಗಳ ಸ್ಥಾನವನ್ನು ಪೊಲೀಸ್ ಅಧಿಕಾರಿಗಳಾದ ಸದಾಶಿವ ಖೋತ್ ಹಾಗೂ ದೀಪಾ ಖೋತ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಜೀವ ಕೋಷ್ಟಿ ಹಾಗೂ ಯುವರಾಜ್ ರತ್ನಾಕರ್ ರವರು ಸಮಾಯೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತವಿಕ ಭಾಷಣವನ್ನು ಸತೀಶ್ ಪಾಟೀಲ್ ಅವರು ಮಾಡಿದರು. ಶ್ರೀಮತಿ ಅಂಜುದೇವಿ ಕೇದನೂರ್ಕಾರ್, ಶ್ರೀಮತಿ ಶೋಭಾ ಪಾಟೀಲ್, ಶ್ರೀಮತಿ ಲೀನಾ ಜಾಧವ ಅವರು ಅತಿಥಿಗಳಿಗೆ ಪುಷ್ಪಾಗುಚ್ಚವನ್ನಿತ್ತು ಸ್ವಾಗತಿಸಿದರು.
ರಾಧಾಸ್ವಾಮಿ ಸತ್ಸಂಗದ ಸಂಜಯ್ ಪಾಟೀಲ್, ಲಕ್ಷ್ಮಣ ಪೂಜಾರಿ, ರಜನಿ ಉಮ್ರಾಣಿ, ಕೃಷ್ಣ ಹುಲಕುಂದ, ದೌಲತ್ ಕೇಸ್ವಾನಿ ಮತ್ತು ಸುನೀಲ್ ದೇಸುರಕರ ಉಪಸ್ಥಿತರಿದ್ದರು.
ಶ್ರೀಮತಿ ಅನುರಾಧ ತಾರೀಹಾಳ ಕರ ನಿರೂಪಿಸಿದರು ಮತ್ತು ಎನ್. ಡಿ. ಮಾದಾರ ಇವರು ಧನ್ಯವಾದ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಶಿಬಿರದ ಉಪಯೋಗ ಪಡೆದರು.