ಅತಿ ಉದ್ದನೆಯ ಕೊಕ್ಕು, ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಆಕರ್ಷಕ ಮೈ ಬಣ್ಣದ ಹಕ್ಕಿಗಳು ತಮ್ಮ ಕೂಗುಗಳು ಒಂದು ತರಹದ ಕೀರಲು ಧ್ವನಿಯಿಂದ ಕೂಡಿದ್ದು, ಜೋಡಿಗಳಾಗಿ ಅಥವಾ ಸಣ್ಣ ಗುಂಪುಗಳಾಗಿ ಹಾರಾಡುವ ಅತ್ಯಾಕರ್ಷಕ ಹಕ್ಕಿಗಳೇ ಮಂಗಟ್ಟೆ ಹಕ್ಕಿಗಳು..
ಸಂಪೂರ್ಣ ಬೆಳವಣಿಗೆ ಹೊಂದಿದ ಮಂಗಟ್ಟೆ ಹಕ್ಕಿ ರೆಕ್ಕೆ ಅಗಲಿಸಿ ಹಾರುವಾಗ ಸುಮಾರು ಐದು ಅಡಿಗಳಷ್ಟು ಉದ್ದಕ್ಕೆ ಹರಡಿಕೊಳ್ಳುತ್ತದೆ. ಅಲ್ಲದೇ ಹಾರಾಡುವಾಗ ಪಟಪಟ ಎಂಬ ಶಬ್ದವನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಸರ್ವಾಹಾರಿ ಅಭ್ಯಾಸ ಇರುವ ಈ ಹಕ್ಕಿಗಳು ಹಣ್ಣುಗಳು, ಕಪ್ಪೆ, ಪುಟ್ಟ ಹಾವುಗಳು, ಸಣ್ಣ ಪಕ್ಷಿಗಳು, ಚೇಳು, ಹಲ್ಲಿ ಮುಂತಾದ ಸಣ್ಣ ಜೀವಿಗಳನ್ನು ಹಿಡಿದು ತಿಂದು ಬದುಕುತ್ತವೆಯಾದರೂ ಇವುಗಳು ಮುಖ್ಯವಾಗಿ ಫಲಾಹಾರಿ ಹಕ್ಕಿಗಳು. ಇವು ಹಣ್ಣು ತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ.
ಹಣ್ಣು ಬಿಡುವ ಅಪರೂಪದ ಮರಗಳ ಬೀಜ ಪ್ರಸರಣದಲ್ಲಿ ಬಹು ಮುಖ್ಯ ಪಾತ್ರವಹಿಸುವ ಈ ಹಕ್ಕಿಗಳು ಕಾಡು ಬೆಳೆಯಲು ಕಾರಣವಾಗುತ್ತವೆ. ಆದ್ದರಿಂದ ಇವನ್ನು (farmers of forest ) “ಅರಣ್ಯದ ಕೃಷಿಕ” ಎಂದೂ ಕರೆಯುವುದುಂಟು. ಈ ಸುಂದರ ಹಕ್ಕಿಗಳು ತಮ್ಮ ವಿಶಿಷ್ಟ ಗುಣಲಕ್ಷಣಗಳು ಮತ್ತು ನಡವಳಿಕೆಗಳಿಂದ ಮನಸೂರೆಗೊಳಿಸುತ್ತವೆ.
ಜಗತ್ತಿನಾದ್ಯಂತ ಒಟ್ಟು 62 ಪ್ರಬೇಧಗಳು ಇದ್ದು ಭಾರತದಲ್ಲಿ 9 ಬಗೆಯ ಮತ್ತು ಕರ್ನಾಟಕದಲ್ಲಿ 4 ಜಾತಿಯ ಮಂಗಟ್ಟೆ ಹಕ್ಕಿಗಳು ಕಾಣ ಸಿಗುತ್ತವೆ. ವಿಭಿನ್ನವಾದ ನಾಲ್ಕು ಪ್ರಭೇದ ಹಾರ್ನ್’ಬಿಲ್’ಗಳಾದ ಗ್ರೇಟ್ ಹಾರ್ನ್ಬಿಲ್, ಮಲಬಾರ್ ಫೈಡ್ ಹಾರ್ನ್’ಬಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ಇಂಡಿಯನ್ ಗ್ರೇ ಹಾರ್ನ್’ಬಿಲ್ ಪ್ರಭೇದಗಳನ್ನು ದಾಂಡೇಲಿಯಲ್ಲಿ ಕಾಣಬಹುದಾಗಿದೆ. ಗ್ರೇಟ್ ಹಾರ್ನ್ಬಿಲ್ ಭಾರತದಲ್ಲಿ ಕಂಡು ಬಂದರೆ, ಮಲಬಾರ್ ಫೈಡ್ ಹಾರ್ನ್ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುತ್ತದೆ.
ಭಾರತೀಯ ಬೂದು ಮಂಗಟ್ಟೆ ಅಥವಾ ಭಾರತೀಯ ಬೂದು ಹಾರ್ನ್ಬಿಲ್ (ಓಸಿಸೆರಾಸ್ ಬಿರೋಸ್ಟ್ರಿಸ್) ಪಕ್ಷಿಯು ಭಾರತೀಯ ಉಪಖಂಡದಲ್ಲಿ ಮಾತ್ರ ಕಂಡುಬರುವ ಸಾಧಾರಣವಾದ ಮಂಗಟ್ಟೆ ಪಕ್ಷಿಯಾಗಿದೆ. ಇವುಗಳು ಗೂಡು ಕಟ್ಟುವ ಋತುವಿನ ಅವಧಿಯು ಏಪ್ರಿಲ್ನಿಂದ ಜೂನ್ನವರೆಗಿರುತ್ತದೆ.
ಭಾರತೀಯ ಬೂದು ಹಾರ್ನ್ಬಿಲ್ ಗಳು ಸಾಧಾರಣವಾಗಿ ಎತ್ತರವಾಗಿರುವ ಭಾರೀ ವೃಕ್ಷಗಳಲ್ಲಿನ ಪೊಟರೆಗಳೊಳಗೆ ಎಲ್ಲಾ ಸುರಕ್ಷತೆ ಮತ್ತು ಸಮೀಪದಲ್ಲೇ ತಮ್ಮ ಆಹಾರ ಲಭ್ಯತೆ ಎಲ್ಲವನ್ನು ಪರೀಕ್ಷಿಸಿ ತಮ್ಮ ಗೂಡನ್ನು ಕಟ್ಟಿಕೊಳ್ಳುತ್ತವೆ.
ಇನ್ನು ತನ್ನ ಕುಟುಂಬವನ್ನು ಬೆಳೆಸುವ ಸಮಯ ಬಂದಾಗ ಗಂಡು ಹಕ್ಕಿಯು ಹೆಣ್ಣು ಹಕ್ಕಿ ಒಲಿಸಿ ಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತದೆ. ಸವಿ ಸವಿ ರುಚಿಯಾದ ಹಣ್ಣುಗಳು ಮತ್ತು ಇತರೆ ಸ್ವಾದಭರಿತ ಆಹಾರವನ್ನು ತಂದು ಹೆಣ್ಣು ಹಕ್ಕಿಗೆ ನೀಡುತ್ತದೆ. ಪರಸ್ಪರ ಒಪ್ಪಿದ ನಂತರ ಅನನ್ಯ ಪ್ರೇಮಿಗಳ ಜೋಡಿಗಳಂತೆ ತಮ್ಮ ಪ್ರೇಮ ಲೋಕದಲ್ಲಿ ವಿಹರಿಸುತ್ತ ಪ್ರೇಮ ನಿವೇದನೆಯನ್ನು ಮಾಡುತ್ತಾ ಗಾಳಿಯಲ್ಲಿ ಹಾರುತ್ತಾ ತೇಲುತ್ತಾ ತಮ್ಮ ಕೊಕ್ಕುಗಳನ್ನು ಪರಸ್ಪರ ಸೇರಿಸಿ ತಮ್ಮ ಸಂತಾನವನ್ನು ಬೆಳೆಸುವ ಪ್ರಕ್ರಿಯೆ ಮತ್ತು ಮಿಲನವನ್ನು ಅನುಭವಿಸುತ್ತವೆ. ನಂತರ ಇಬ್ಬರು ಅನನ್ಯ ಪ್ರೇಮಿಗಳ ನಡುವಿನ ಅಗಾಧ ಪ್ರೇಮಕ್ಕೆ ಎಂತಹದೆ ಕಷ್ಟಕರ ಪರಿಸ್ಥಿತಿ ಬಂದರೂ ಧೈರ್ಯದಿಂದಲೇ ಎದುರಿಸುವ ಮತ್ತು ನೋವುಗಳಲ್ಲಿಯೂ ನಲಿವನ್ನು ಕಾಣುವ ಶಕ್ತಿ ಪ್ರೇಮಿಗಳಿಗೆ ಮೀಸಲು ಎಂಬಂತೆ ಮುಂದೆ ಪೋಷಕತ್ವದ ಹೊಣೆಗಾರಿಕೆ ಗಳನ್ನು ಮತ್ತು ಇತರೆ ಎಲ್ಲಾ ಸವಾಲುಗಳನ್ನು ಸಂತೋಷದಿಂದಲೇ ಸ್ವೀಕರಿಸಿ ಮುನ್ನುಗ್ಗಲು ಸಹ ಪ್ರೇರಣೆ ನೀಡುವ ಶಕ್ತಿ ಅಗಾಧ ಪ್ರೇಮ ಹೊಂದಿದೆ ಎಂಬುದಕ್ಕೆ ಈ ಮಂಗಟ್ಟೆ ಹಕ್ಕಿಗಳು ಅತ್ಯುತ್ತಮ ನಿದರ್ಶನವಾಗಿದ್ದು ತಮ್ಮ ಒಲವಿನ ಸರಸ ಸಲ್ಲಾಪಗಳ ನಂತರ ಜೋಡಿ ಹಕ್ಕಿಗಳು ತಮ್ಮ ಅತೀವ ಕ್ಲಿಷ್ಟಕರ ಸಮಯವಾದ ಗೂಡು ನಿರ್ಮಿಸುವ ಕಾಯಕಕ್ಕೆ ಅಣಿಯಾಗುತ್ತವೆ. ಮೊದಲಿಗೆ ಎತ್ತರದ ಮತ್ತು ದಪ್ಪ ಮರಗಳಲ್ಲಿ ಗೂಡು ರಚಿಸಲು ಗಂಡು ಹಕ್ಕಿ ಮುಂದಾಗುತ್ತದೆ. ಮರಕುಟಿಗನೋ, ಕುಟುರ ಹಕ್ಕಿಯೋ, ಗಿಳಿಗಳೋ ಮೈನಾ ಹಕ್ಕಿಗಳು ನಿರ್ಮಿಸಿ ಹೋದ ಸಣ್ಣ ಪುಟ್ಟ ರಂಧ್ರವನ್ನೇ ತನ್ನ ಬಲವಾದ ಕೊಕ್ಕಿನೊಂದಿಗೆ ಇನ್ನಷ್ಟು ಕೊರೆದು ಅಗಲಿಸಿ ಹೆಣ್ಣು ಹಕ್ಕಿ ಹಾಗೂ ಮರಿಗಳಿಗೆ ಸಾಕಾಗುವಷ್ಟು ಜಾಗದ ವ್ಯವಸ್ಥೆ ಮಾಡುತ್ತದೆ.
ಈಗಾಗಲೇ ಇರುವ ಪೊಟರೆಯನ್ನೇ ಮತ್ತಷ್ಟು ಕೊರೆದು ಅಗತ್ಯವಾಗುವ ರೀತಿಯಲ್ಲಿ ಹೊಂದಿಸಿಕೊಳ್ಳುತ್ತವೆ.
ನಂತರ ಹೆಣ್ಣು ಹಕ್ಕಿಯು ತನ್ನ ವಿಲಕ್ಷಣ ಗುಣಕ್ಕೆ ಸಜ್ಜಾಗಿ ಎರಡು ತಿಂಗಳಿಗೂ ಅಧಿಕ ಕಾಲ ತನ್ನಷ್ಟಕ್ಕೆ ಗೃಹಬಂದಿ ಯಾಗುವುದು ಪಕ್ಷಿಗಳ ಪ್ರಪಂಚದಲ್ಲಿಯೇ ಅಪರೂಪದ ವಿಚಿತ್ರ ನಡವಳಿಕೆಯಾಗಿದೆ. ಪೊಟರೆಯೊಳಗಿನ ಗೂಡನ್ನು ಪ್ರವೇಶಿಸಿ ಗೂಡಿನ ಪ್ರವೇಶದ ಕಿಂಡಿಯನ್ನು ಗಂಡು ಪಕ್ಷಿಯು ತನಗೆ ಆಹಾರ ಕೊಕ್ಕಿನಿಂದ ನೀಡಲು ಬೇಕಾದಷ್ಟು ಮಾತ್ರವೇ ಲಂಬವಾದ ಸೀಳನ್ನು ಬಿಡುವ ರೀತಿಯಲ್ಲಿ ಮುಚ್ಚಿಬಿಡುತ್ತದೆ. ಗೂಡಿನ ಪ್ರವೇಶದ್ವಾರವನ್ನು ಹೆಣ್ಣುಪಕ್ಷಿಯು ತನ್ನ ಮಲ ಮತ್ತು ಪೊಟರೆಯೊಳಗಿನಿಂದ ಕೆರೆದು ತೆಗೆದ ಮರದ ಪುಡಿ ಹಾಗೂ ಗಂಡು ಹಕ್ಕಿ ತರುವ ಮಣ್ಣಿನ ಸಹಾಯದಿಂದ ಬಾಗಿಲನ್ನು ಮುಚ್ಚಿರುತ್ತದೆ. ಗೂಡಿನೊಳಗಿರುವ ಸಂದರ್ಭದಲ್ಲಿ, ಹೆಣ್ಣು ಪಕ್ಷಿಯು ತನ್ನ ಹಾರುವ ಗರಿಗಳನ್ನು ಉದುರಿಸುತ್ತಾ, ಹೀಗೆ ಉದುರಿಹೋದ ಗರಿಗಳ ಮರು ಬೆಳವಣಿಗೆಯು ಮರಿಗಳು ಸಂಪೂರ್ಣಾವಸ್ಥೆಗೆ ಬರುವುದಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು ಸೃಷ್ಟಿಯ ವೈಚಿತ್ರವೇ ಸರಿ..
ಈ ರೀತಿಯ ಗೂಡು ದಾಳಿ ಇಡಲು ಬರುವ ಇತರ ಜೀವಿಗಳಿಂದ ಮತ್ತು ಶತ್ರುಗಳಿಂದ ಮರಿಗಳನ್ನು ರಕ್ಷಿಸಲು ತಾವೇ ಮಾಡಿಕೊಂಡಿರುವ ವಿಶಿಷ್ಟವಾದ ಉಪಾಯವಾಗಿದೆ ಹಾಗೂ ಗೂಡಿನ ರಕ್ಷಣೆಗಾಗಿ ಈ ತಂತ್ರಗಾರಿಕೆಯಾಗಿದೆ. ಗರ್ಭವತಿಯಾದ ಹೆಣ್ಣಿಗೆ ಬೇಸಿಗೆಯ ಸಮಯದಲ್ಲಿ ಪ್ರಕೃತಿಯು ಒದಗಿಸುವ ಆಲ ಜಾತಿಯ ಮತ್ತು ಇತರೆ ಸ್ವಾದಿಷ್ಟ-ಪೋಷಕಯುಕ್ತ ಹಣ್ಣುಗಳನ್ನು ಮತ್ತು ಇತರೆ ಹುಳು ಉಪ್ಪಟೆ ಕೀಟಗಳ ಆಹಾರವನ್ನು ದಿನಕ್ಕೆ ಹತ್ತು ಹಲವು ಬಾರಿ ನಿರಂತರವಾಗಿ ಗಂಡು ತಂದು ಪೂರೈಸುತ್ತದೆ. ಮೊಟ್ಟೆಯಿಟ್ಟ ನಂತರ ಹೆಣ್ಣು ಕಾವು ಕೊಡುತ್ತಾ ಮರಿಗಳು ಮೊಟ್ಟೆಯೊಡೆದು ಬಂದಾಗ ತಾಯಿ ಹಕ್ಕಿ ತನ್ನ ಮರಿಗಳಿಗೆ ಅದನ್ನು ತಿನ್ನಿಸುತ್ತದೆ. ಇಡೀ ಕುಟುಂಬಕ್ಕೆ ಆಹಾರ ಒದಗಿಸುವ ಹೊಣೆ ಹೊತ್ತ ಗಂಡು ಅತ್ಯಂತ ಕಾಳಜಿಯಿಂದ ತನ್ನ ಪೋಷಕತ್ವದ ಹೊಣೆ ಅತ್ಯಂತ ನಿಷ್ಠೆ ಮತ್ತು ಶ್ರದ್ದೆಯಿಂದಲೇ ದಣಿವರಿಯದಂತೆ ನಿಭಾಯಿಸುತ್ತದೆ.
ಸುಮಾರು ಎಂಬತ್ತು ದಿನಗಳ ಗೃಹಬಂಧನದ ಬಳಿಕ, ಮರಿಗಳ ಬೆಳವಣಿಗೆಯ ಅವಧಿ ಮುಗಿದಂತೆ ಒಳಗಿರುವ ಹೆಣ್ಣು ಹೊರಗಿರುವ ಗಂಡಿನೊಡನೆ ಸೇರಿ ಭಾಗಶಃ ಮುಚ್ಚಿರುವ ಬಾಗಿಲನ್ನು ಕೊಕ್ಕಿನಿಂದ ತೆಗೆದು ನಂತರ ಹೆಣ್ಣು ತನ್ನ ಮರಿಗಳೊಂದಿಗೆ ಗೃಹ ಬಂಧನದಿಂದ ಹೊರಬರುತ್ತದೆ.
ಮರಿಗಳ ಪೋಷಣೆ ಸಮಯದಲ್ಲಿ ತಾಯಿ ಹಕ್ಕಿ ಗೃಹಬಂಧನದಲ್ಲಿರುವಾಗ ಯಾವುದಾದರೂ ಕಾರಣದಿಂದ ಗಂಡು ಮೃತಪಟ್ಟರೆ, ಮುಚ್ಚಿದ ಗೂಡಿನಿಂದ ಹೊರಬರಲಾರದೆ ಮತ್ತು ಆಹಾರ ಸಿಗದೆ ತಾಯಿ ಹಕ್ಕಿ ಮತ್ತು ಮರಿ ಹಕ್ಕಿಗಳು ಸಾವು ಹೊಂದಬಹುದು..ಬೇರೆ ಇತರೆ ಕಾರಣದಿಂದ ಹೆಣ್ಣು ಮೃತಪಟ್ಟರೆ ಗಂಡು ಸಹ ಆಹಾರ ಸೇವಿಸುವುದನ್ನು ಬಿಟ್ಟು ವಿರಹದಿಂದ ಸಾವನ್ನಪ್ಪುತ್ತದೆ.
ಕಾವು ಪಡೆದು ಮೊಟ್ಟೆ ಬಿರಿದು ಮರಿ ಹೊರ ಪ್ರಪಂಚಕ್ಕೆ ಬರಲು 25-45 ದಿನಗಳು ತಗಲುತ್ತವೆ. ಇವಿಷ್ಟೂ ಹಗಲು ಹಾಗೂ ರಾತ್ರಿಗಳು ತನ್ನ ವಂಶಕ್ಕಾಗಿ ಮರಿಗಳಿಗಾಗಿ ಸಣ್ಣ ಪೊಟರೆಯಲ್ಲಿ ತನ್ನಷ್ಟಕ್ಕೆ ತಾನು ಗೃಹಬಂದಿಯಾಗಿ ಸಂಕಷ್ಟದ ಜೇವನ ಜೀವಿಸುವ ಹೆಣ್ಣು ಹಕ್ಕಿಗೆ ಹೊರ ಪ್ರಪಂಚದ ಸಂಪರ್ಕ ಸಾಧ್ಯವಾಗುವುದು ಕೇವಲ ಗಂಡು ಹಕ್ಕಿಯಿಂದ ಮಾತ್ರ. ಈ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳ ತ್ಯಾಗ ಪರಸ್ಪರ ನಂಬಿಕೆ, ನಿಷ್ಠೆ, ಕಾಳಜಿ ಪೋಷಕತ್ವದ ಹೊಣೆಗಾರಿಕೆಗಳು ವರ್ಣನಾತೀತವಾದದ್ದು. ಆದರ್ಶ ದಂಪತಿ ಪಟ್ಟಿಗೆ ಸೇರಿಸಬಹುದಾದ ಹಾರ್ನ್ ಬಿರ್ಲ್ (ಮಂಗಟ್ಟೆ) ಹಕ್ಕಿಯ ಬದುಕು, ಜೀವನ ಕ್ರಮ ಅತ್ಯಾಕರ್ಷಕ ಮತ್ತು ಈ ಮಂಗಟ್ಟೆ ಹಕ್ಕಿಗಳು ತುಂಬ ಗಮನ ಸೆಳೆಯುತ್ತವೆ. ಈ ಪಕ್ಷಿ ಏಕ ಸಂಗಾತಿ ಕಾನೂನು ಪಾಲನೆ ಮಾಡುವ ಹಾಗೂ ತನ್ನ ಬದುಕಿನ ಪ್ರಾರಂಭದಿಂದ ಕೊನೆಯವರೆಗೂ ಒಂದೇ ಹೆಣ್ಣಿನೊಂದಿಗೆ ಕಾಲಕಳೆಯುತ್ತದೆ. ಮತ್ತೆ ಎಲ್ಲೇ ಹೋದರೂ ಎಷ್ಟೇ ದೂರ ಹಾರಿದರೂ ಸಹ ಸಂಗಾತಿಯೊಂದಿಗೇ ಸದಾ ಇರುತ್ತದೆ.
ಈ ರೀತಿಯಲ್ಲಿ ಮಂಗಟ್ಟೆ ಹಕ್ಕಿಗಳು ದಾಂಪತ್ಯ ಜೀವನವೆಂಬುದು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಸಂತೃಪ್ತಿಯ ಆಗರವೆಂದು ತಿಳಿಸುತ್ತಾ ಆದರ್ಶ ದಾಂಪತ್ಯದ ಜೀವನದಲ್ಲಿಯೂ ಮತ್ತು ಅಸಂಖ್ಯಾತ ಮರಗಳ ಬೆಳವಣಿಗೆಗೆ ಜೀವನ ಪೂರ್ತಿಯಾಗಿ ತಮ್ಮದೇ ಬಹು ಅಮೂಲ್ಯ ವಾದ ಕೊಡುಗೆಯನ್ನು ಪರಿಸರಕ್ಕೆ ನೀಡುತ್ತಾ ಪರಿಸರ ಸ್ನೇಹಿಯಾಗಿಯೂ ಸಹ ಬದುಕಿ ಎಲ್ಲರಿಗೂ ಸಹ ಆದರ್ಶಮಯವಾಗಿವೆ…
ಅಪರೂಪದ ಹಕ್ಕಿ ಜಾತಿಗಳಾದ ಮಂಗಟ್ಟೆ ಹಕ್ಕಿಗಳ ಸಂತತಿ ಸಂರಕ್ಷಣೆಗೆ ಅವುಗಳ ಆವಾಸ ತಾಣಗಳಾದ ಎತ್ತರದ ಮರಗಳನ್ನು ಒಣಗಿದ ಮರಗಳನ್ನು ಮತ್ತು ಅವುಗಳ ಆಹಾರವಾದ ಆಲ, ಅರಳಿ ಇತರೆ ಕಾಡು ಹಣ್ಣಿನ ಜಾತಿಯ ಮರಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವುದು ನಮ್ಮೆಲ್ಲರ ಅತೀ ಮುಖ್ಯ ಹೊಣೆಗಾರಿಕೆ ಯಾಗಿದೆ.
ಮನುಷ್ಯ ಮನುಷ್ಯತ್ವ ಮರೆತು ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಇತರೆ ಎಲ್ಲಾ ಜೀವಿಗಳ ಸಂತತಿಯ ವಿನಾಶ ಮಾಡುತ್ತಿರುವುದು ಎಷ್ಟು ಸರಿ??
ಮಾಹಿತಿ ::
ನಾಗರಾಜ ಕಂಬಾಳಿ ಮಠ.
ವಲಯ ಅರಣ್ಯಾಧಿಕಾರಿ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
~ಪರಿಸರ ಪರಿವಾರ