ಬೀದರ – ಇವರು ಅರುಣ ಗೌತಮ್. ಮೂಲತಃ ಉತ್ತರ ಪ್ರದೇಶದವರು. ಹೆಚ್ಚುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಯ ಧ್ಯೇಯ ಹೊತ್ತು ಕನ್ಯಾಕುಮಾರಿಯಿಂದ ದೆಹಲಿಯ ವರೆಗೆ ರಾಷ್ಟ್ರ ಧ್ವಜ ಹಿಡಿದು ಪಾದಯಾತ್ರೆ ಮಾಡುತ್ತಿರುವ ರಾಷ್ಟ್ರೀಯ ಪರಿವರ್ತನಾ ಪಾರ್ಟಿಯ ಅಧ್ಯಕ್ಷರು.
ಶೇ 70 ರಷ್ಟು ಯುವಕರು ರಾಜಕೀಯದಲ್ಲಿ ಬಂದರೆ ಮಾತ್ರ ದೇಶದಲ್ಲಿ ಭ್ರಷ್ಟಾಚಾರ ತಡೆಯಬಹುದು ಎಂದು ಹೇಳುತ್ತಾರೆ.
60 ವರ್ಷ ದಾಟಿದವರು ದೇಶದ ರಾಜಕೀಯದಲ್ಲಿ ಶೇ. 30 ರಷ್ಟು ಮಾತ್ರ ಇರಬೇಕು ಉಳಿದವರು ಯುವಕರಿಗೆ ಅವಕಾಶ ಕೊಡಬೇಕು. ಯುವಕರು ಗೆದ್ದು ಬಂದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ.
60 ವರ್ಷ ದಾಟಿದ ವೃದರು ರಾಜಕೀಯ ರಂಗದಲ್ಲಿ ಇದ್ದರೆ ಅವರಿಗೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಯುವಕರು ಮಾತ್ರ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ ಎಂಬುದು ಇವರ ಗಟ್ಟಿ ಅಭಿಪ್ರಾಯ. ಹೀಗಾಗಿ ಯುವಕರು ಮಾತ್ರ ರಾಜಕೀಯದಲ್ಲಿ ಮುಂದುವರೆಯಬೇಕು ಈ ತರಹದ ಕಾನೂನು ನಮ್ಮ ದೇಶದಲ್ಲಿ ತರಬೇಕು ಈ ವಿಷಯಕ್ಕೆ ಸಂಬಂಧಪಟ್ಟಂತೆ ರಾಷ್ಟ್ರಪತಿ ಅವರೊಂದಿಗೆ ಚರ್ಚಿಸಿ ಮನವಿ ಪತ್ರ ಸಲ್ಲಿಸಲು ಪಾದಯಾತ್ರೆಯ ಮೂಲಕ ಹೋಗುತ್ತಿದ್ದೇನೆ ಎಂದು ಅರುಣ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಹೂಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಅವರು ವರದಿಗಾರರ ಜೊತೆ ಮಾತನಾಡಿದರು.
ಯುವಕರು ರಾಜಕಾರಣಕ್ಕೆ ಬಂದರೆ ಖರ್ಚು ಕಡಿಮೆಯಾಗುತ್ತದೆ. ಭದ್ರತೆ ಖರ್ಚು ಉಳಿಯುತ್ತದೆ. ಮುದುಕ ರಾಜಕಾರಣಿಗಳಿಗೆ ಗೇಟ್ ತೆಗೆಯಲು ಕೂಡ ಆಳು ಬೇಕು. 70-80-90 ವರ್ಷದ ರಾಜಕಾರಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದಾರೆ. ಇವರು ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಇವರು ಮೂಲತಃ ಉತ್ತರಪ್ರದೇಶದವರಾಗಿದ್ದು ಉತ್ತರಪ್ರದೇಶದಿಂದ ಕನ್ಯಾಕುಮಾರಿಯವರೆಗೆ ರೈಲಿನ ಮುಖಾಂತರ ತೆರಳಿ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.