ಶ್ರೇಷ್ಠ ಮೌಲ್ಯಗಳ ಸಂಕೇತ ಗಣೇಶೋತ್ಸವ…!

0
282

ಪತ್ರಿಕೆಗಳಲ್ಲಿ ಅನ್ಯಕೋಮಿನವರಾದ ಬೆಳಗಾವಿಯ ಜಿಲ್ಲಾಧಿಕಾರಿಗಳು ಗಣೇಶನ ಪೂಜಿಸಿ ಸ್ವತಃ ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಸುದ್ದಿ ನನ್ನ ಗಮನ ಸೆಳೆದುದಲ್ಲದೆ ಅವರ ಮೇರು ವ್ಯಕ್ತಿತ್ವದ ಬಗ್ಗೆ ಹೆಮ್ಮೆಎನಿಸಿತು.

ಯುವ ಅಧಿಕಾರಿಗಳಾದ ಅವರು ಜಾತಿ, ಧರ್ಮಗಳ
ಎಲ್ಲೆ ಮೀರಿ ಏಕತೆಯ ಸಂದೇಶ ಸಮಾಜಕ್ಕೆನೀಡಿದ್ದಾರೆ. ಇದು ಇಂದಿನ ಮಕ್ಕಳು ಅತೀ ಅವಶ್ಯಕವಾಗಿ ತಿಳಿದುಕೊಳ್ಳಬೇಕಾದ ಅಂಶವಾಗಿದೆ.

ಇತ್ತೀಚೆಗೆ ತಮ್ಮಹಿತಕ್ಕಾಗಿಯೋ ಅಥವಾ ಇನ್ನಾವುದೋ ಸ್ವಾರ್ಥಕ್ಕಾಗಿಯೋ ಅಂಧಾನುಕರಣೆಯಿಂದ
ಜಾತಿ, ಧರ್ಮಗಳ ಹೆಸರಿನಲ್ಲಿ ಚಿತ್ರ-ವಿಚಿತ್ರ ಹೇಳಿಕೆ ನೀಡುತ್ತಾ, ಪುಸ್ತಕ ಪ್ರಕಟಿಸುತ್ತಾ, ಉಡುಗೆ ತೊಡುಗೆ, ಆಹಾರ ಪದ್ಧತಿಗಳಲ್ಲಿ ತಮ್ಮ ಜಾತಿ, ಧರ್ಮವೇ ಶ್ರೇಷ್ಠ ಎನ್ನುವ ವಿಚಿತ್ರ ನಡವಳಿಕೆ ಪ್ರದರ್ಶಿಸುತ್ತಾ, ಚಿತ್ತವೈಕಲ್ಯಯುತ ಹೇಳಿಕೆ ನೀಡುತ್ತಾ, ಸಮಾಜದ ಶಾಂತಿಯ ಕೊಳಕ್ಕೆ ಇವರ ಕೊಳಕು ಮನಸ್ಸುಗಳ, ಕ್ಷುದ್ರ ವಿಚಾರಗಳ ಕಲ್ಲೆಸೆಯುತ್ತಾ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುತ್ತಿರುವ ತನ್ಮೂಲಕ ದೇಶದ ಮೌಲಿಕ ಸಂಪತ್ತಾದ ಯುವಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ವಿಚಿತ್ರ- ವಿಕಲಾಂಗ ಮನಸ್ಸುಗಳಿಗೆ ಇದು ತಕ್ಕ ಸಂದೇಶವಾಗಿದೆ.

ಹೌದು, ಭಾರತವು ಹಲವು ಧರ್ಮಗಳ ನೆಲೆ. ಇದು ಮೂಲತಃ ಹಿಂದುಗಳ ನೆಲೆಯಾದರೂ ಮಾನವೀಯ ನೆಲೆಗಟ್ಟಿನಲ್ಲಿ ಅನೇಕ ಧರ್ಮಗಳಿಗೆ ಆಶ್ರಯ ನೀಡುತ್ತಲೇ ಬಂದಿದೆ. ಸಕಲ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನು ಭಾರತದ ಪ್ರಜೆಗಳು ಮೊದಲಿನಿಂದಲೂ ಪರಿಪಾಲಿಸುತ್ತಾ ಸೌಹಾರ್ದತೆಯಿಂದ ಬಾಳುತ್ತ ಬಂದ ಇತಿಹಾಸವಿದೆ. ಆದರೆ ಇತ್ತೀಚೆಗೆ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ. ಸದ್ಧಿಲ್ಲದೆ ಯುವ ಮನಸ್ಸುಗಳನ್ನು ವಿಚಿದ್ರಕಾರಿ, ಭಯಾನಕ, ಧಾರ್ಮಿಕ ವಿಚಾರಗಳಿಂದ ವಿಕೃತಗೊಳಿಸಿ, ದೇಶದ ಆಧಾರ ಸ್ತಂಭಗಳಾಗಬೇಕಾದ ಯುವ ಜನತೆಯನ್ನು ಕೆಲ ವಿಧ್ವಂಸಕ ಮನಸ್ಸುಳ್ಳ ,ನಾಯಕರೆಂಬ ಪಟ್ಟ ಭದ್ರಹಿತಾಸಕ್ತಿಯ ವ್ಯಕ್ತಿಗಳು ದಿಕ್ಕು ತಪ್ಪಿಸಿ, ದೇಶದ ಭದ್ರತೆಗೆ, ಸಂಸ್ಕೃತಿಗೆ, ಏಕತೆಗೆ ಧಕ್ಕೆ ತರುವ ಕಾರ್ಯದಲ್ಲಿ ಯುವ ಜನತೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಪ್ರತಿದಿನ ಒಂದಿಲ್ಲೊಂದು ವಿಚಿತ್ರ, ವಿಧ್ವಂಸಕ ಸುದ್ದಿಯನ್ನು ಬಿತ್ತರಿಸುವ, ನಾಯಕರೆಂಬ ಅರೆಬರೆ ಜ್ಞಾನದ ಅವಿವೇಕಿಗಳು ಮಾಡಿದ ಹಾಗೂ ಮಾತನಾಡಿದ ಹೇಳಿಕೆಗಳ ಮೇಲೆ ವಾರಗಟ್ಟಲೆ ಚರ್ಚೆ ಮಾಡುತ್ತ ಅಸಂಬದ್ಧ ಹೇಳಿಕೆ, ಕಾರಣಗಳನ್ನು ವೈಭವೀಕರಿಸುತ್ತ ಸಾಗಿರುವ ಇಂದಿನ ಮಾಧ್ಯಮಗಳ ವಿಚ್ಛಿದ್ರಕಾರಿ ನಡೆಯೂ ಕೂಡ ಸೂಕ್ಷ್ಮ ಮನಸ್ಸುಗಳ ಮೇಲೆ ಆಘಾತಕಾರಿ ಪರಿಣಾಮವನ್ನುಂಟು ಮಾಡುತ್ತಿದೆ. ಕೊಲೆ,ಸುಲಿಗೆ, ಅತ್ಯಾಚಾರ ಹಾಗೂ ಅತಿರೇಕ ಭಾವನೆಗಳ ಹುಚ್ಚಾಟಗಳ ಪ್ರಸಾರ ವೈಭವೀಕರಣ ಮೌಲ್ಯಗಳ ಕಲಿಕೆಗೆ ಬಲವಾದ ಪೆಟ್ಟು ಕೊಡುತ್ತಿದೆ.

ಶಿಕ್ಷಕಿಯಾಗಿ ಸ್ವತಃ ನಾನು ಇದನ್ನು ಕಂಡುಕೊಂಡಿದ್ದೇನೆ.
ಹಾಗಂತ ಅಂತಹ ದುಷ್ಟ ವಿಚಾರಗಳನ್ನಷ್ಟೇ ಸಮೂಹ ಮಾಧ್ಯಮಗಳು ಬಿತ್ತರಿಸುತ್ತಿಲ್ಲ ಆದರೆ ಒಳ್ಳೆಯ ವಿಷಯಗಳ ಪ್ರಸಾರ ಕಡಿಮೆ ಎಂದೇ ಹೇಳಬಹುದು.

ಇತ್ತೀಚೆಗಂತೂ ಕೊಲೆ, ಅತ್ಯಾಚಾರ, ದರೋಡೆ ಮಾಡಿ, ರಾಜ್ಯ ಹಾಗೂ ರಾಷ್ಟ್ರ ಸಂಪತ್ತುಗಳ ಲೂಟಿ ಹೊಡೆದು ನಾಯಕರೆಂದು ಬಿಂಬಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾಡು-ನುಡಿ ಮೌಲ್ಯ, ಸಂಸ್ಕೃತಿ, ಏಕತೆ, ದೇಶಾಭಿಮಾನ ಎಂದು ಮೌಲಿಕ ಜೀವನವನ್ನು ನಡೆಸುತ್ತಿರುವವರು ಇಂತಹ ಹಗಲು ದರೋಡೆಕೋರರ ಹಾಗೂ ಮರ್ಯಾದೆಯ ಎಲ್ಲೆ ಮೀರಿದ ದಗಾಕೋರರ ಅಸಹ್ಯಕರ ನಡವಳಿಕೆಯ ಅಬ್ಬರದಲ್ಲಿ ಸಾತ್ವಿಕರು ನಲುಗಿ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಧರ್ಮ-ಧರ್ಮಗಳ ಕೆಸರೆರಚಾಟದಲ್ಲಿ ಪ್ರತಿ ಧರ್ಮದಲ್ಲಿರುವ ಉನ್ನತ ಮಾನವೀಯ ಮೌಲ್ಯಗಳು ಇಂದಿನ ಯುವಪೀಳಿಗೆಗೆ ತಲುಪುತ್ತಿಲ್ಲ. ಪ್ರತಿ ಧರ್ಮಗಳ ವಿರುದ್ಧ ವಿಚಿದ್ರಕಾರಿ ಸಮಾಜಘಾತಕ ಹೇಳಿಕೆ ನೀಡುತ್ತಾ ವಿರೋಧಾಭಾಸ ಸೃಷ್ಟಿಸಿ ಜನತೆಯನ್ನು ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುತ್ತಿರುವ ಕೆಲವು ಕೆಟ್ಟ ಮನಸುಗಳ ವಿರುದ್ಧ ಇಂಥ ಉನ್ನತ ಶಿಕ್ಷಣ ಪಡೆದ ಯುವಜನತೆ ತಮ್ಮ ಶ್ರೇಷ್ಠ ಶಿಕ್ಷಣದ ಮೌಲ್ಯವನ್ನು ಜಾತ್ಯತೀತ ನಡವಳಿಕೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರ ಮೂಲಕ ದೇಶದ ಘನತೆಗೆ,ಸಾಂವಿಧಾನಿಕ ಆಶಯಗಳಿಗೆ ಒತ್ತು ನೀಡಿ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವಲ್ಲಿ ದಿಟ್ಟ ಹೆಜ್ಜೆ ಇಡಬೇಕಾಗಿರುವುದು ಇಂದಿನ ಅತ್ಯಂತ ತುರ್ತು ವಿಷಯವಾಗಿದೆ.

ನೂರು ಜಾತಿ, ಧರ್ಮ, ಆಚಾರ, ವಿಚಾರ, ಸಂಪ್ರದಾಯ,
ಉಡುಗೆ-ತೊಡುಗೆ ಏನೇ ಇರಲಿ ಅದು ಆಯಾ ಕೋಮಿನ ಜನರ ಮನೆಯ ಹೊಸ್ತಿಲೊಳಗೆ ಇರಲಿ. ಸಾರ್ವಜನಿಕವಾಗಿ ಅದು ಪ್ರದರ್ಶನವಾಗಕೂಡದು. ಭಾರತದ ನೆಲ, ಜಲ, ಎಲ್ಲರಿಗೂ ಒಂದೇ. ಧರ್ಮದ ಹೆಸರಿನಲ್ಲಿ ದೇಶವನ್ನು, ದೇಶದ ಜನರ ಮನಸನ್ನು ಒಡೆಯುವ ವಿಚ್ಛಿದ್ರಕಾರಿ,ಹಿಂಸಾತ್ಮಕ ಮನಸುಗಳ ಆಟ ನಡೆಯದಂತೆ ಇಂದಿನ ಯುವ ಪೀಳಿಗೆ ಇಂತಹ ಸೌಹಾರ್ದಯುತ ನಡವಳಿಕೆಯಿಂದ ದೇಶವನ್ನು ಸುಭದ್ರ ಗೊಳಿಸಬೇಕಾಗಿದೆ.

ಈ ನೆಲೆಗಟ್ಟಿನ ಮೇಲೆ ನಮ್ಮ ಬೆಳಗಾವಿ ಜಿಲ್ಲಾಧಿಕಾರಿಯವರ ಈ ನಡೆ ಎಲ್ಲರೂ ಮೆಚ್ಚುವಂತಹದ್ದು. ಯುವಜನರು ಈ ರೀತಿ ಧರ್ಮದ ಅನುಕರಣೆಯ ಗಡಿಯನ್ನು ದಾಟಿ “ಯುವಬಲಂ, ತಾನೊಂದೇ ಕುಲಂ” ಎಂಬಂತೆ ‘ಯುವಜನತೆಯೇ ಒಂದು ಧರ್ಮ’, ಇಲ್ಲಿ ಮತ್ತಾವುದೇ ಜಾತಿ, ಧರ್ಮ ಭೇಧಗಳಿಲ್ಲದಂತೆ ಶ್ರೇಷ್ಠ ಶಿಕ್ಷಣ ಪಡೆದ ಶ್ರೇಷ್ಠ ಉಚ್ಚಾರಗಳುಳ್ಳ ಶ್ರೇಷ್ಠ ಯುವ ಶಕ್ತಿಯೇ ಈ ದೇಶದ ಶ್ರೇಷ್ಠ ಸಂಪತ್ತಾಗಲಿ.

ಉನ್ನತ ಹುದ್ದೆಯಲ್ಲಿದ್ದು ಸಾಮಾಜಿಕ ಸೌಹಾರ್ದತೆಯ ಸಂದೇಶ ನೀಡಿ ಮಾದರಿಯಾದ ನಮ್ಮ ಬೆಳಗಾವಿ ಜಿಲ್ಲಾಧಿಕಾರಿಗಳ ನಡೆಯನ್ನು ಎಲ್ಲರೂ ಅನುಸರಿಸುವಂತಾಗಲಿ ಹಾಗೂ ದೇಶ ಒಡೆಯುವ ವಿಚಿದ್ರಕಾರಿ ಮನಸ್ಸುಗಳನ್ನು ಹತೋಟಿಯಲ್ಲಿಟ್ಟು ದೇಶದ ರಕ್ಷಕರಾಗಲಿ ಎಂಬುದೇ ಈ ಲೇಖನದ ಆಶಯ.

ಮೂಲತಃ ಪ್ರೌಢಶಾಲಾ ಹಂತದ ಶಿಕ್ಷಕಿಯಾದ ನಾನು ಹದಿಹರೆಯದ ಮಕ್ಕಳ ಮನಸ್ಸು ಬಲ್ಲೆ.
ಎಲ್ಲಿಯೂ ಒಳ್ಳೆಯದನ್ನು ಕಾಣದ ಒಳ್ಳೆಯದನ್ನು ಅನುಸರಿಸಲು ಆಗದ ಮಕ್ಕಳಿಗೆ ಮೌಲ್ಯಗಳನ್ನು ಹೇಳುವುದಾದರೂ ಹೇಗೆ? ಇಂತಹ ಒಳ್ಳೆಯ ಮೌಲಿಕ ನಡೆಗಳು ನಮ್ಮ ಮಕ್ಕಳಿಗೆ ಮಾದರಿಯಾಗುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂದಿನ ಮಕ್ಕಳೇ ಮುಂದಿನ ನಾಡ ನಾಯಕರು ಇಂತಹ ಸೌಹಾರ್ದಯುತ ನಡೆ ಅವರಿಗೆ ಮಾದರಿಯಾಗಲಿ. ಗಡಿನಾಡ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆದ ಜಿಲ್ಲಾಧಿಕಾರಿ ಅವರಿಗೆ ಈ ಮೂಲಕ ಗಣೇಶ ಚತುರ್ಥಿಯ ಶುಭಾಶಯಗಳು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಶಿಕ್ಷಕಿಯಾಗಿ ಮಕ್ಕಳ ಪರವಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಶ್ರೀಮತಿ ಮೀನಾಕ್ಷಿ ಸೂಡಿ
ಇಂಗ್ಲೀಷ ಭಾಷಾ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ತುರಕರಶಿಗೀಹಳ್ಳಿ,
ತಾ|| ಕಿತ್ತೂರು
ಬೆಳಗಾವಿ ಜಿಲ್ಲೆ.
ಫೋನ್ 8073946046.