ಸಿಂದಗಿ; ತಾಲೂಕಿನಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ದ್ರಾಕ್ಷಿ, ಮೆಣಸಿನಕಾಯಿ, ತೊಗರಿ, ಹತ್ತಿ ಸೇರಿದಂತೆ ಅನೇಕ ತೋಟಗಾರಿಕೆ ಹಾಗೂ ಒಣಬೇಸಾಯ ಬೆಳೆಗಳು ಅಪಾರ ಹಾನಿಯಾಗಿದ್ದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಯವರು ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಣ್ಣಗುಡ್ಡಿಹಾಳ, ಹಡಗಿನಾಳ, ಬಸ್ತಿಹಾಳ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ದ್ರಾಕ್ಷಿ, ಮೆಣಸಿನಕಾಯಿ ಬೆಳೆಗಳನ್ನು ವೀಕ್ಷಿಸಿ ಸ್ಥಳದಲ್ಲಿಯೇ ಅಪರ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಸರ್ಕಾರಕ್ಕೆ ವರದಿ ಒಪ್ಪಿಸುವಂತೆ ಮನವಿ ಮಾಡಿದರು.
ನಂತರ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕವಾಗಿ ಮಳೆಯಾಗಿದ್ದರಿಂದ ಅನೇಕ ಬೆಳೆಗಳು ಹಾನಿಯಾಗಿದ್ದು ಅವುಗಳ ಸಂಪೂರ್ಣವಾಗಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು ರೈತರು ಧೈರ್ಯಗೆಡದೆ ಮುಂದೆ ಸಾಗಿ ನಿಮ್ಮ ಜೊತೆ ನಾನಿದ್ದೇನೆ ಎಂದು ರೈತರಿಗೆ ಧೈರ್ಯ ತುಂಬಿ ಸರ್ಕಾರದಿಂದ ಬರುವ ಸವಲತ್ತು ಹಾಗೂ ಬೆಳೆ ಪರಿಹಾರಕ್ಕಾಗಿ ತಹಶೀಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ತೋಟಗಾರಿಕಾ ಸಚಿವರು, ಕೃಷಿ ಸಚಿವರು ಜಂಟಿಯಾಗಿ ಸರ್ವೇ ಮಾಡಿ ವಿಶೇಷವಾಗಿ ಈ ಭಾಗದ ದ್ರಾಕ್ಷಿ ಹಾಗೂ ಮೆಣಸಿನಕಾಯಿ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು ಸಿಂದಗಿ ಮತಕ್ಷೇತ್ರದಲ್ಲಿರುವ ಹಾನಿಯಾಗಿರುವ ದ್ರಾಕ್ಷಿ, ತೊಗರಿ, ಹತ್ತಿ ಮೆಣಸಿನಕಾಯಿ, ಬೆಳೆ ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕೊಡುವ ನಿಟ್ಟಿನಲ್ಲಿ ಆದಷ್ಟು ಬೇಗನೆ ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಹಾನಿಗೊಳಗಾದ ರೈತರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.