ಮೂಡಲಗಿ: ಐಟಿಐ ತರಬೇತಿ ಪೂರ್ಣಗೊಳಿಸಿದ ತರಬೇತಿದಾರರು ಕಡ್ಡಾಯವಾಗಿ ಅಪ್ರೆಂಟಿಸ್ ಮುಗಿಸುವುದು ಅತ್ಯವಶ್ಯಕ. ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಐಟಿಐ ತರಬೇತಿದಾರರು ವೃತ್ತಿ ನೈಪುಣ್ಯತೆ ಮತ್ತು ಡಿಪ್ಲೋಮಾ ಕೋರ್ಸಿಗೆ ತತ್ಸಮಾನ ವಿದ್ಯಾರ್ಹತೆ ಪಡೆಯುತ್ತಾರೆ. ಜೊತೆಗೆ ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತದೆ ಎಂದು ಮೂಡಲಗಿ ತಾಲೂಕಾ ಸಹಾಯಕ ಅಪ್ರೆಂಟಿಸ್‌ಶಿಪ್ ಸಲಹೆಗಾರ ಮತ್ತು ರಾಯಬಾಗ ಸರ್ಕಾರಿ ಐಟಿಐ ತರಬೇತಿ ಅಧಿಕಾರಿ ಎಸ್.ಎಸ್. ಗುಬ್ಬಿ ಹೇಳಿದರು.
ಇಲ್ಲಿಯ ಚೈತನ್ಯ ಕ್ಷೇಮಾಭಿವೃದ್ಧಿ ಸೊಸಾಯಿಟಿಯ ಚೈತನ್ಯ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿಯಲ್ಲಿ ಮೂಡಲಗಿ ತಾಲೂಕಾ ಐಟಿಐ ತರಬೇತಿದಾರರಿಗೆ ಹಾಗೂ ಉದ್ದಿಮೆದಾರರಿಗೆ ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಮತ್ತು ಅಪ್ರೆಂಟಿಸಶಿಪ್ ತರಬೇತಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಈರಸಂಗಯ್ಯ ಬಾಗೋಜಿಮಠ, ಭೋರುಕಾ ಪಾವರ್ ಕಾರ್ಪೋರೇಶನ್ ವಿಂಡ್ ಪವರ ಪ್ರೊಜೆಕ್ಟ್ ರಾಯಬಾಗ ಮತ್ತು ಮೂಡಲಗಿ ಮಾನವ ಸಂಪನ್ಮೂಲ್ ವ್ಯವಸ್ಥಾಪಕ ಶ್ರೀಧರ ಮರ್ಲಖಾನೆ, ವಿಂಡ್ ಪವರ ಪ್ರೊಜೆಕ್ಟ್ ಅಭಿಯಂತರ ಲಕ್ಷ್ಮಿಕಾಂತ ಬೋರಗಾಂವ ಅವರು ಕೈಗಾರಿಕಾ ತರಬೇತಿ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ ಅವರು ಅಪ್ರೆಂಟಿಸ್‌ಶಿಪ್ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಚೈತನ್ಯ ಆಶ್ರಮ ಶಾಲೆಯ ಆಡಳಿತಾಧಿಕಾರಿ ಸುಭಾಸ ಕಮದಾಳ, ಚೈತನ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಜೋಕಿ, ಚೈತನ್ಯ ಅರ್ಬನ್ ಸೊಸಾಯಿಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ, ಗೋಕಾಕ-ಮೂಡಲಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ವಾಯ್.ಬಿ.ಪಾಟೀಲ, ಕಾಲೇಜಿನ ಉಪಾಧ್ಯಕ್ಷ ವಿಜಯ ಎಸ್. ಹೊರಟ್ಟಿ, ಸಂಸ್ಥೆಯ ಆಡಳಿತ ಮಂಡಳಿ, ತಾಲೂಕಿನ ವಿವಿಧ ಐಟಿಐ ಕಾಲೇಜಗಳ ಪ್ರಾಚಾರ್ಯರು, ಸಿಬ್ಬಂದಿ ಮತ್ತು ತರಬೇತಿದಾರರು ಪಾಲ್ಗೊಂಡಿದ್ದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಸುನೀಲ ಕುಳ್ಳೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎಲ್. ಪೂಜೇರಿ ಸ್ವಾಗತಿಸಿದರು, ಜೆ.ಎಸ್. ಸಮಾಜೆ ವಂದಿಸಿದರು, ಟಿ.ಆರ್.ಝಾರೆ ನೀರೂಪಿಸಿದರು.