ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ, ತನುವನಲ್ಲಾಡಿಸಿ ನೋಡುವೆ ನೀನು/
ಮನವನಲ್ಲಾಡಿಸಿ ನೋಡುವೆ ನೀನು?
ಧನವನಲ್ಲಾಡಿಸಿ ನೋಡುವೆ ನೀನು?
ಇವೆಲ್ಲಕಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವ /
(ಸಮಗ್ರ ವಚನ ಸಂಪುಟ-೨೦೧೬)
ಕ್ರಿ.ಶ. ೧೬೭೩ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ ೧೪ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ, ತನ್ನ ೨೮ನೆ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದನು. ತನ್ನ ಬಾಲ್ಯ ಸ್ನೇಹಿತನಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ ಜೈನ ಮತಾವಲಂಬಿಯಾಗಿ, ಅಪ್ರತಿಮ ರಾಜನೀತಿಯ ಚಾಣಕ್ಯನಾಗಿದ್ದನು. ಈತನನ್ನು ತನ್ನ ಮಂತ್ರಿ (ಟ್ಯೂಟರ್) ಯನ್ನಾಗಿ ನೇಮಿಸಿಕೊಂಡ ಚಿಕ್ಕದೇವರಾಜ ಒಡೆಯರ, ರಾಜ್ಯಭಾರದ ಮೊದಲ ವರ್ಷ ಗಳನ್ನು ಕೇವಲ ಒಳಾಡಳಿತ ಸುಧಾರಣೆಗೆ ಮೀಸಲಾಗಿರಿಸಿದ್ದ. ನಂತರ ಕಂದಾಯ ಸುಧಾರಣೆಯತ್ತ ಗಮನವಹಿಸಿದ.
ಕ್ರಿ.ಶ. ೧೬೭೮ರಲ್ಲಿ ರೈತರ ಮೇಲೆ ವಿಪರೀತ ಆದಾಯ ತೆರಿಗೆ (ಭೂ ಕಂದಾಯ) ವಿಧಿಸಲು ನಿರ್ಧರಿಸಿದ. ಹೀಗಾಗಿ ರೈತರು ತಮ್ಮ ಉತ್ಪನ್ನದ ಆರಾಂಶವನ್ನು ಅಂದ್ರೆ ಆರು ಮಣಕ್ಕೆ ಒಂದು ಮಣ ರಾಜ್ಯದ ಬೊಕ್ಕಸಕ್ಕೆ ಕೊಡಬೇಕಾಗಿತ್ತು. ಇದನ್ನು ವಿರೋಧಿಸಿದ ರೈತರು ಅರಸನ ನಿರ್ಧಾರದ ವಿರುದ್ಧ ದಂಗೆ ಎದ್ದರು. ಲಿಂಗಾಯತ ರೈತರನ್ನು ಅಂದಿನ ಬಹುತೇಕ ಜಂಗಮ ಮಠಗಳು ಬೆಂಬಲಿಸಿದ್ದವು. ರಾಜನ ಬೊಕ್ಕಸದ ಬದಲು, ತಮ್ಮ ಮಠಗಳಿಗೆ ದೇಣಿಗೆ ರೂಪದಲ್ಲಿ ತೆರಿಗೆ ಸಂದಾಯಿಸುವಂತೆ ಒತ್ತಾಯಿಸಿದ್ದವು. ಯಾವುದಕ್ಕೂ ಹೆದರದೆ ಕೆಲವು ರೈತಾಪಿ ವರ್ಗ ಬೇರೆ ಕಡೆಗೆ ಫಲಾಯನವಾಗಲು ಪ್ರಯತ್ನಿಸಿದ್ದರು. ತಮ್ಮ ಭೂಮಿಗಳನ್ನು ಉಳುಮೆ ಮಾಡದೆ ಬೀಳುಗೆಡವಿದ್ದರು. ವರ್ಷ ಕಳೆದರೂ ರೈತರ ತಕರಾರು ಮತ್ತು ಕರ ನಿರಾಕರಣೆಯ ದಂಗೆ ಹತೋಟಿಗೆ ಬಂದಿರಲಿಲ್ಲ.
ಈ ಪರಿಸ್ಥಿತಿಯನ್ನು ಅರಿತ ಮೈಸೂರು ಅರಮನೆಯ ಚಾಣಾಕ್ಷ ಮಂತ್ರಿ ವಿಶಾಲಾಕ್ಷ ಪಂಡಿತ, ಕೊನೆಗೆ ರೈತರೊಂದಿಗೆ ಒಪ್ಪಂಧದ ನಾಟಕವಾಡಿದ. ಪ್ರತಿಭಟನೆ ಹತ್ತಿಕ್ಕಲು ಎಲ್ಲಾ ರೈತರನ್ನು ಹಾಗೂ ಮಠಾಧೀಶರನ್ನು ಮಾತುಕತೆಗೆ ಆಹ್ವಾನಿಸಿದ. ಅದಕ್ಕೆಂದು ನಂಜನಗೂಡಿನಲ್ಲಿ ಸಭೆ ಕರೆದ. ಆ ಸಭೆಗೆ ಒಟ್ಟು ೭೭೦ ಮಠಗಳ ಸ್ವಾಮಿಗಳು ಆಗಮಿಸಿದ್ದರು. ಮೊದಲೆ ನಂಜನಗೂಡಿನ ಹಳ್ಳವೊಂದರ ದಡದಲ್ಲಿ ನಾಲ್ಕು ಗೋಡೆಗಳ ಅಂಗಳ ನಿರ್ಮಿಸಿದ್ದರು. ಅಲ್ಲಿಯೇ ಭಾವಿ ತೋಡಿ, ಸುತ್ತಲೂ ಡೇರೆಗಳನ್ನು ನಿರ್ಮಿಸಿದ್ದರು. ಡೇರೆಗಳ ಹಿಂದಿದ್ದ ಹಳ್ಳದ ಮೊಗಸಾಲೆಯಲ್ಲಿ ನಿಂತರೆ ಸಾರ್ವಜನಿಕರ ಕಣ್ಣಿಗೆ ಏನೂ ಕಾಣಿಸದಂತೆ ವ್ಯವಸ್ಥೆ ಮಾಡಿದ್ದರು. ಜಂಗಮ ಮಠಾಧೀಶರನ್ನು ಸೈನಿಕರು ರಾಜ ಮರ್ಯಾದೆಯಲ್ಲಿ ಒಬ್ಬೊಬ್ಬರಂತೆ ಸರದಿ ಸಾಲಿನಲ್ಲಿರಿಸಿ, ಸ್ವತಃ ಚಿಕ್ಕದೇವರಾಜ ಒಡೆಯರ್ ಒಳಗೆ ಬರಮಾಡಿಕೊಳ್ಳಲು ನಿಂತಿದ್ದ.
ಸಂಜೆಯಾದ್ರೂ ಅವರನ್ನು ಮಾತುಕತೆ ಸಭೆಗೆ ಕರೆದಿರಲಿಲ್ಲ. ಎಲ್ಲರೂ ಹೊರಾಂಗಣದಲ್ಲೆ ನೆರೆದಿದ್ದಕ್ಕೆ ಬಹುತೇಕರು ತೀವ್ರ ಹಸಿವಿನಿಂದ ಬಳಲುತ್ತಿದ್ದರು. ಒಳಗೆ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಿದ್ದ ಜಂಗಮ ಮಠಾಧೀಶರಿಗೆ ವಿಶೇಷ ಭೋಜನ ವ್ಯವಸ್ಥೆ ಇರಬಹುದೆಂದು ಭಾವಿಸಿ ಪ್ರತಿಯೊಬ್ಬರೂ ಗೌರವ ಮತ್ತು ಹಂಬಲದಿ೦ದ ಒಳ ಹೋಗುತ್ತಿದ್ದರು. ಮೂರು ಗಂಟೆ ಕಳೆದರೂ ಒಳ ಹೋದವರಲ್ಲಿ ಒಬ್ಬರೂ ಹೊರ ಬಂದಿರಲಿಲ್ಲ. ಹೊರಗಿದ್ದವರಿಗೆ ಅಷ್ಟೊತ್ತು ಒಳಗೆ ಏನೂ ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲವೂ ಕಾಡುತ್ತಿತ್ತು.
ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು,ಮಣ್ಣು ಹೆಣ್ಣಿಂಗೆ ಸತ್ತುದು ಕೋಟಿ ಗುಹೇಶ್ವರಾ/
ನಿಮಗಾಗಿ ಸತ್ತವರನಾರನೂ ಕಾಣೆ
-ಅಲ್ಲಮ ಪ್ರಭುದೇವರು (ಸಮಗ್ರ ವಚನ ಸಂಪುಟ-೨೦೧೬)
ಹ೦ಬಲದಿ೦ದ ಒಳ ಪ್ರವೇಶಿಸಿದ ಒಬ್ಬೊಬ್ಬರ ತಲೆಯನ್ನೇ ಕಡಿದಾದ ಕಿಂಡಿಯಲ್ಲಿ ಇಣುಕಿ ನೋಡುವಂತೆ ಪ್ರೇರೆಪಿಸಿ, ಮೇಲಿನಿಂದ ಹತಾರ ಹಾಕಿ ಶಿರಚ್ಛೇಧನ ಮಾಡುತ್ತಿದ್ದರು. ಅವರ ಶವವನ್ನು ಡೇರೆಯ ಹಿಂದಿದ್ದ ಹಳ್ಳಕ್ಕೆ ತಳ್ಳುತ್ತಿದ್ದರು. ರುಂಡವನ್ನು ಭಾವಿಗೆ ದೂಡುತ್ತಿದ್ದರು. ಹೀಗೆ ಒಟ್ಟು ೪೪೦ ಜಂಗಮ ಮಠಾದೀಶರ ಶಿರಚ್ಚೇಧನವಾಗಿತ್ತು. ಈ ಸಂದರ್ಭದಲ್ಲಿ ಹೊರಗಿನ ಮೊಗಸಾಲೆಯಲ್ಲಿ ನೆರೆದ ಇತರೆ ಸಭಿಕರು ಜಯಘೋಷ ಹಾಕುವುದರಲ್ಲೇ ಮಗ್ನರಾಗಿದ್ದರು. ಒಳ ಹೋದವರ ಶಿರಚ್ಛೇಧನ ನಡೆದಿದ್ದರ ಕುರಿತು ಗಮನವಹಿಸಿರಲಿಲ್ಲ. ನಂತರ ಸೈನಿಕರನ್ನು ಬಳಸಿ ಉಳಿದವರನ್ನು ಚದುರಿಸಿ ಅವರವರ ಮನೆಗೆ ಅಟ್ಟಿದ್ದರು.
ಜೋಳುವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯ,
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ,
ಕೇಳು ಕೂಡಲಸಂಗಮದೇವಾ
ಮರಣವೇ ಮಹಾನವಮಿ/ (ಸಮಗ್ರ ವಚನ ಸಂಪುಟ-೨೦೧೬)
ಹೀಗೆ ೪೪೦ ಜಂಗಮ ಮಠಾಧೀಶರ ಶೀರಚ್ಛೇದನಗೊಳಿಸಿ ಆ ಭಾವಿಯಲ್ಲಿ ಹಾಕಿದ್ದಕ್ಕೆ “ಶಿರೋಭಾವಿ” ಎಂದು ಇಂದಿಗೂ ಕರೆಯಲಾಗುತ್ತಿದೆ. ಈಗಲೂ ನಂಜನಗೂಡಿನಲ್ಲಿದ್ದು ನೋಡಲು ಸಿಗುತ್ತದೆ. ಈ ಸತ್ಯ ಘಟನೆ ಬ್ರಿಟಿಷ ಅಧಿಕಾರಿಯಾಗಿದ್ದ ವಿಲ್ಕಸ್ ಎಂಬಾತನಿಂದ ತಿಳಿಯುತ್ತಿದ್ದಂತೆ, ಒಂದಿನ ತಮ್ಮ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ವಿಶಾಲಾಕ್ಷ ಪಂಡಿತನನ್ನು ರಾಜಬೀದಿಯಲ್ಲಿ ಸೈನಿಕರಿಬ್ಬರು ಹತ್ಯೆಗೈದರು. ಶಿರಚ್ಛೇದನದಿಂದ ಖಾಲಿಯಾದ ಅಂದಿನ ಮೈಸೂರು ಪ್ರಾಂತ್ಯದ ಒಟ್ಟು ೭೭೦ ಜಂಗಮ ಮಠಗಳಿಗೆ ಆಂಧ್ರದ ಬ್ರಾಹ್ಮಣ ಪಂಡಿತರನ್ನು ನೇಮಿಸಲಾಯಿತು. ಅವರ ಜನಿವಾರದ ಜೊತೆಗೆ ಲಿಂಗವನ್ನೂ ಕಟ್ಟಿ ಸ್ವಾಮಿಗಳೆಂದು ಬಿಂಬಿಸಲಾಯಿತು. ಆ ಲಿಂಗಾಯತ ಮಠಗಳಲ್ಲಿ ವಚನಗಳ ಬದಲಾಗಿ ಸಂಸ್ಕೃತದ ವೇದ, ಆಗಮ, ಪುರಾಣಗಳ ಪಾರಾಯಣ, ಪಠಣ ಆರಂಭಗೊ೦ಡವು. ಅವಾಗಿನಿಂದ ಲಿಂಗಾಯತರ ಮನೆಗಳಲ್ಲಿ ವೈಧಿಕ, ಶೈವ ಆಚರಣೆಗಳು ಬೆಳೆದವು. ಅಲ್ಲದೆ ಲಿಂಗಾಯತದೊ೦ದಿಗೆ ವೀರಶೈವವೂ ಸಮ್ಮಿಶ್ರಣವಾಯಿತು. ಇದೇ ಕಾರಣಕ್ಕೆ ಅತೀ ಹೆಚ್ಚು ಲಿಂಗಾಯತರನ್ನು ಹೊಂದಿದ್ದ ಮೈಸೂರು ಪ್ರಾಂತ್ಯದಲ್ಲಿ ಹಿಂದು ವೀರಶೈವರ ಸಂಖ್ಯೆ ಬೆಳೆಯ ತೊಡಗಿತು.
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜವ ತುಂಬಿ,
ಮನೆಯೊಳಗೆ ಮೆನೆಯೊಡೆಯ ಇದ್ದಾನೋ ಇಲ್ಲವೋ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ,
ಕೂಡಲಸಂಗಮದೇವಾ / (ಸಮಗ್ರ ವಚನ ಸಂಪುಟ-೨೦೧೬)
ಆರ೦ಭದಿ೦ದಲೂ ಲಿಂಗಾಯತರಾಗಿದ್ದ ಮೈಸೂರು ಒಡೆಯರು ಕ್ರಿ.ಶ.೧೬೧೦ ರಿಂದ ವೈಷ್ಣವರಾಗಿ ಪರಿವರ್ತನೆಗೊಂಡರು. ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ಧರ್ಮವಾಗಿದ್ದ ಲಿಂಗಾಯತ, ಜಾತಿಯನ್ನಾಗಿ ಮಾಡಿದ್ದೂ ಅವರೇ! ೧೮೭೧ರ ಜನಗಣತಿಯಲ್ಲಿ ಬ್ರಿಟಿಷರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿದ್ದರು. ಆಗ ಮೈಸೂರು ಪ್ರಾಂತ್ಯದಲ್ಲಿ ೪,೧೭೯೦೦ ರಷ್ಟು ಲಿಂಗಾಯತ ಕುಟುಂಬಗಳಿದ್ದವು. ಕ್ರಮೇಣ ಅವರೆಲ್ಲರಿಗೂ ವೀರಶೈವ ಪದ ಜೋಡಿಸಲಾಯಿತು. ಕ್ರಿ.ಶ.೧೮೯೧ ರ ಜನಗಣತಿಯಲ್ಲಿ ಅಂದಿನ ದಿವಾನ್ರಾಗಿದ್ದ ರಂಗಾಚಾರ್ಲು ಅವರು ಲಿಂಗಾಯತರನ್ನು ಮೂಲೆಗುಂಪಾಗಿಸಲು ಉದ್ದೇಶಪೂರ್ವಕವಾಗಿಯೇ ಲಿಂಗಾಯತ ಧರ್ಮವನ್ನು ವಿಸರ್ಜಿಸಿ, ಹಿಂದು ಧರ್ಮದ ಶೂದ್ರ ಗುಂಪಿಗೆ ಸೇರಿಸಿದ್ದರು. ಇದೇ ಸಂದರ್ಭದಲ್ಲಿ ವೀರಶೈವ ಪದವನ್ನೂ ಜೋಡಿಸಲಾಯಿತು.
(ನಿಮ್ಮ ಅಭಿಪ್ರಾಯಗಳನ್ನು 9448863309 ಇಲ್ಲಿಗೆ ವಾಟ್ಸಪ್ ಮಾಡಿರಿ)

–ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email – satishitagi10@gmail.com

