ಅನೌಪಚಾರಿಕ ಉದ್ಘಾಟನೆ ಹಿಂದಕ್ಕೆ
ಮೂಡಲಗಿ – ಹಾಳು ಬಿದ್ದಂತಾಗಿರುವ ಅತಿಥಿ ಗೃಹವನ್ನು ಇನ್ನೊಂದು ತಿಂಗಳಲ್ಲಿ ಸ್ವಚ್ಛ ಮಾಡಿ ಉದ್ಘಾಟನೆ ಮಾಡಿ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು ಎಂದು ಗೋಕಾಕದ ಎಪಿಎಮ್ ಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಕಾರ್ಮಿಕ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಮೂಡಲಗಿ ಎಪಿಎಮ್ ಸಿ ಆವರಣದಲ್ಲಿರುವ ಅತಿಥಿ ಗೃಹ ನಿರ್ಮಾಣವಾಗಿ ಮೂರು ವರ್ಷವಾದರೂ ಉದ್ಘಾಟನೆಯಾಗದೇ ಉಳಿದು ಅನೈತಿಕ ಚಟುವಟಿಕೆಗಳ ತಾಣವಾಗಿ ಉಳಿದಿದೆ ಎಂಬ ಬಗ್ಗೆ Times of ಕರ್ನಾಟಕ ದಲ್ಲಿ ಪ್ರಕಟವಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ರವಿವಾರ ಅತಿಥಿ ಗೃಹದ ಪುನರುತ್ಥಾನ ಹಾಗೂ ಉದ್ಘಾಟನೆಗೆ ಅವರು ತೆರಳಿದ್ದ ಸಂದರ್ಭದಲ್ಲಿ ಮಾತನಾಡಿದರು.
ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಸಾಮಾಜಿಕ ಕಾರ್ಯಕರ್ತ ಗುರು ಗಂಗಣ್ಣವರ ತಂಡದವರಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆಂಬುದಾಗಿ ಅವರು ತಿಳಿಸಿದರು.
ಇದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ದನಗಳ ಪೇಟೆಯನ್ನೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಪಿಎಂಸಿ ಅಧಿಕಾರಿಗಳು ಕೆಲಸ ಮಾಡಬೇಕು. ಸ್ಥಳೀಯ ಶಾಸಕರೂ ಕೂಡ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದ ಅವರು, ಎಪಿಎಂಸಿಗೆ ಬರುವ, ಹೋಗುವ ವಾಹನಗಳಿಗೆ ತಲಾ ನೂರು ರೂಪಾಯಿ ವಸೂಲು ಮಾಡಲಾಗುತ್ತಿದೆ ಈ ಬಗ್ಗೆ ಹೋರಾಟ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.
ಸುಮಾರು ೪೪ ಲಕ್ಷ ರೂ. ಗಳಲ್ಲಿ ಈ ಅತಿಥಿ ಗೃಹ ಕಟ್ಟಲಾಗಿದೆ. ಪೀಠೋಪಕರಣಕ್ಕಾಗಿ ಬಂದಿರುವ ೧೦ ಲಕ್ಷ ರೂ. ಗಳನ್ನು ಎಪಿಎಂಸಿ ಅಧಿಕಾರಿಗಳೇ ಇಟ್ಟುಕೊಂಡಿದ್ದಾರೆ. ಅದನ್ನೂ ಕೂಡ ಕಟ್ಟಡದ ಅಭಿವೃದ್ಧಿ ಗೆ ಬಳಸಿಕೊಳ್ಳಬೇಕು. ಇಂದು ಅನೌಪಚಾರಿಕವಾಗಿ ಈ ಅತಿಥಿ ಗೃಹವನ್ನು ಉದ್ಘಾಟನೆ ಗೊಳಿಸಲು ನಾವು ಬಂದಿದ್ದೆವು. ಆದರೆ ಎಪಿಎಂಸಿ ಅಧಿಕಾರಿಗಳು ಇದೇ ದಿ. ೨೪ ರಂದು ಸಭೆ ಕರೆದು ಮಾತನಾಡಿ ಒಂದು ತಿಂಗಳಲ್ಲಿ ಅತಿಥಿ ಗೃಹ ಪುನರುತ್ಥಾನ ಮಾಡಿ ಉದ್ಘಾಟನೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರಿಂದ ನಮ್ಮ ಕಾರ್ಯಕ್ರಮ ಹಿಂತೆಗೆದುಕೊಂಡಿದ್ದೇವೆ ಎಂಬುದಾಗಿ ಲಕ್ಕಣ್ಣ ಸವಸುದ್ದಿ ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಗುರುನಾಥ ಗಂಗನ್ನವರ, ಸುರೇಶ ನಾಯ್ಕ, ಸುಭಾಸ ಲೋಕನ್ನವರ, ಮಹಾದೇವ ಬಂಗೆನ್ನವರ, ಸದಾಶಿವ ನಾವಿ, ಕಲೋಳಪ್ಪಾ ಗಸ್ತಿ, ಹಣಮಂತ ನಾವಿ, ಶಂಕರ ಸಣ್ಣಕ್ಕಿ, ಶಿವಬಸು ರಡರಟ್ಟಿ, ಭೀಮಶೆಪ್ಪಾ ಯಲ್ಲಟ್ಟಿ, ಬಾಲಪ್ಪಾ ರಾಜಾಪೂರ, ಹಣಮಂತ ಮುಗಳಖೋಡ, ಅನೇಕರು ಇದ್ದರು.