– ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ
ಬೆಂಗಳೂರು – ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರವಲ್ಲ, ಜವಾಬ್ದಾರಿಯುತ ಸ್ವಾತಂತ್ರ್ಯ ನಮ್ಮೆಲ್ಲರ ದೀಕ್ಷೆಯಾಗಬೇಕು. ಸ್ವಾತಂತ್ರ್ಯದ ಫಲ ಸಕಲರಿಗೂ ಸಮನಾಗಿ ಮುಟ್ಟಬೇಕು. ಆ ನಿಟ್ಟಿನಲ್ಲಿ ಸ್ವಾತಂತ್ರೋತ್ಸವ ಪ್ರತಿದಿನವೂ ಪ್ರತಿ ಮನೆಯ, ಪ್ರತಿ ಮನದ ಆತ್ಮಾವಲೋಕನದ ದಿನವಾಗಬೇಕು ಎಂದು ಅಮರ ಬಾಪು ಚಿಂತನ ದ್ವೈಮಾಸಿಕ ಪತ್ರಿಕೆಯ ಉಪಸಂಪಾದಕ ಮತ್ತು ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರು ಅಭಿಪ್ರಾಯ ಪಟ್ಟರು .
ಬೆಂಗಳೂರು ಹೊರ ವಲಯದ ಬೇಗೂರು ಸಮೀಪ ಮೈಲಸಂದ್ರದ ಎಂ ಎನ್ ಆರ್ ವರ್ಲ್ಡ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಪರಕೀಯರ ಆಡಳಿತದಿಂದ ದೂರವಾಗಿ ಸ್ವತಂತ್ರ ಭಾರತದ ಪ್ರಜೆಗಳಾಗಿ 77 ಸಂವತ್ಸರಗಳನ್ನು ಪೂರೈಸಿದ್ದೇವೆ. ಸ್ವಾತಂತ್ರ್ಯಾನಂತರದ ರಾಷ್ಟ್ರ ನಿರ್ಮಾಪಕರು ತಮಗೆ ದೊರಕಿರುವ ಸ್ವಾತಂತ್ರ್ಯವನ್ನು ನವ ಸಮಾಜ ನಿರ್ಮಾಣದ ಅಭ್ಯುದಯಕ್ಕೆ ಮೀಸಲಾಗಿಡುವ ಕನಸು ಕಂಡರು,ಆದರೆ ನಮ್ಮ ಇತ್ತೀಚಿನ ರಾಜಕೀಯ ನಾಯಕರು ದೇಶಕ್ಕೆ ದೊರಕಿರುವ ಸ್ವಾತಂತ್ರ್ಯವನ್ನು ತಮಗೆ ದೊರೆತ ರಾಜಕೀಯ ಸ್ವಾತಂತ್ರ್ಯ ಎಂದುಕೊಂಡು ಬೀಗುತ್ತಿದ್ದಾರೆ. ಸಂಘಟಿತ ಹೋರಾಟದ ಫಲದಿಂದ ಸ್ವಾತಂತ್ರ್ಯ ಗಳಿಸಿದ್ದು, ಮನುಷ್ಯ ಸಂಘಟನಾಗುವುದರಲ್ಲಿಯೇ ಸಾಧನೆ ಅಡಗಿದೆ ಇದೇ ಭಾರತೀಯ ಸಂಸ್ಕೃತಿಯ ತಿರುಳು ಎಂದರು.
ಎಂ ಎನ್ ಆರ್ ಮತ್ತು ಎನ್ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಂಸ್ಥಾಪಕ ಅಧ್ಯಕ್ಷ ಎನ್ ನಂಜ ರೆಡ್ಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ವರೆಗೆ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ ನಡೆಯಿತು. ಎಂ ಎನ್ ಆರ್ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಎಂ ಎನ್ ಆರ್ ವರ್ಲ್ಡ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಆರ್ ಮೋಹನ್ ಕುಮಾರ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.