ಹಳ್ಳೂರ – ರಾಜ್ಯ ಬಜೆಟ್ ನಲ್ಲಿ ಮಾಳಿ,ಮಾಲಗಾರ ಸಮಾಜಕ್ಕೆ ಅನುದಾನ ನೀಡದಿರುವುದು ಖಂಡನೀಯ ಹಿಂದಿನ ಬಿಜೆಪಿ ಸರಕಾರ ಘೋಷಣೆ ಮಾಡಿದ ಮಾಳಿ,ಮಾಲಗಾರ ಸಮಾಜದ ಅಭಿವೃದ್ಧಿ ನಿಗಮವನ್ನು ಕಾರ್ಯ ರೂಪಕ್ಕೆ ತಂದು ಬಜೆಟ್ ನಲ್ಲಿ ಅನುದಾನ ನೀಡುತ್ತೇನೆ ಎಂದು ಹೇಳಿ ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಳಿ,ಮಾಲಗಾರ ಸಮಾಜಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ 30 ರಿಂದ 35 ಲಕ್ಷ ಜನಸಂಖ್ಯೆ ಹೊಂದಿದ ಮುಗ್ದ ಸಮಾಜಕ್ಕೆ ಯಾವ ಸರಕಾರ ಅಧಿಕಾರಕ್ಕೆ ಬಂದರು ನಿರ್ಲಕ್ಷ ಮಾಡುತ್ತಾ ಬಂದಿದೆ ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಈಡೇರಿಸದೇ ಮಲತಾಯಿ ದೋರಣೆ ಮಾಡುತ್ತಿರುವುದು ಖಂಡನೀಯ. ಮಾಳಿ,ಮಾಲಗಾರ ಸಮಾಜದ ಅಭಿವೃದ್ಧಿ ನಿಗಮ ಕಾರ್ಯ ರೂಪಕ್ಕೆ ತಂದು ಅನುದಾನ ಬಿಡುಗಡೆ ಮಾಡುವುದಾಗಿ ಹೇಳುತ್ತಾ ಬಂದಿದ್ದರು ಶುಕ್ರವಾರ ನಡೆದ ರಾಜ್ಯ ಬಜೆಟ್ ನಲ್ಲಿ ನಮ್ಮ ಸಮಾಜಕ್ಕೆ ಅನುದಾನ ಬಿಡುಗಡೆ ಮಾಡದೆ ಇದ್ದದ್ದು ಬೇಸರ ಉಂಟಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಮುದಾಯ ಹೊಂದಿದ್ದ ಸಮಾಜ ಬಾಂದವರು ಅತ್ಯಂತ ಕಡು ಬಡವರಾಗಿದ್ದು ಕೃಷಿ, ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ ಇಂತಹ ಸಮಾಜಕ್ಕೆ ಅನ್ಯಾಯವಾಗುತ್ತಾ ಬಂದಿದೆ. ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಊಟದಲ್ಲಿ ಉಪ್ಪಿನಕಾಯಿಯಂತೆ ಉಪಯೋಗಿಸಿಕೊಂಡು ಸಮಾಜಕ್ಕೆ ಅನ್ಯಾಯ ಮಾಡುತ್ತಾ ಬಂದಿರುತ್ತಾರೆ ಹೀಗೆ ಮುಂದುವರೆದರೆ ಮುಂಬರುವ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.