ಮೂಡಲಗಿ: ರಾಜ್ಯದ ಜನ ಸಾಮಾನ್ಯರಿಗೆ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ ನಾನು ಆ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸೂಚಿಸುತ್ತೇನೆ ಎಂದು ರಾಜ್ಯಪಾಲ ಡಾ. ತಾವರಚಂದ ಗೆಹ್ಲೋಟ್ ಭರವಸೆ ನೀಡಿದರು.
ಸೋಮವಾರ ಬೆಂಗಳೂರಿನ ರಾಜಭವನದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ರಾಜ್ಯಪಾಲರನ್ನು ಸೌಹಾರ್ದಯುತ ಭೇಟಿಯಾಗಿ ಅಭಿನಂದಿಸಿದ ಸಂದರ್ಭದಲ್ಲಿ ರಾಜ್ಯಪಾಲರು ರಾಜ್ಯದ ಜನತೆಯ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದಲ್ಲಿ ಸಮಸ್ಯೆಗಳಿಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ರಾಜ್ಯದ ರೈತರ ಸಮಸ್ಯೆಗಳು, ಕೃಷಿ ಕಾನೂನುಗಳು, ಕಿಸಾನ ಸಮ್ಮಾನ ನಿಧಿ ಯೋಜನೆ ಹೀಗೆ ಹಲವಾರು ಯೋಜನೆಗಳ ಬಗೆ ಚರ್ಚೆ ನಡೆಸಿದ ರಾಜ್ಯಪಾಲರು ಅತ್ಯಂತ ವಿಶ್ವಾರ್ಹತೆಯಿಂದ ಕುಳಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲ ಡಾ. ತಾವರಚಂದ ಗೆಹ್ಲೋಟ್ ಅವರು ರಾಜ್ಯಸಭಾ ಸಭಾನಾಯಕರಾದ ಸಂದರ್ಭದಲ್ಲಿನ ಕಾರ್ಯಕಲಾಪಗಳ ಬಗೆಗಿನ ಅನುಭವಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೊಕೇಶಗೌಡ, ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಸಾದ, ಬಸವರಾಜ ಹುಳ್ಳೇರ ಇದ್ದರು.