ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಘೋಷಣೆಯಾಗಿದ್ದು ಒಂದೇ ಹಂತದಲ್ಲಿ ಎಲ್ಲ ೨೨೪ ಸ್ಥಾನಗಳಿಗೆ ಚುನಾವಣೆ ಮುಗಿಸಿ ಬಿಡಲಿದೆ ಚುನಾವಣಾ ಆಯೋಗ.
ಚುನಾವಣೆಯ ಅಧಿಸೂಚನೆಯನ್ನು ಏಪ್ರಿಲ್ ೧೩ ರಂದು ಹೊರಡಿಸಲಾಗುತ್ತಿದ್ದು ಏ. ೨೦ ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಏ.೨೧ ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನ ಏ. ೨೪, ಮೇ ೧೦ ರಂದು ಚುನಾವಣೆ ಹಾಗೂ ಮೇ. ೧೩ ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಇಂದಿನಿಂದಲೆ ಜಾರಿಯಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಅಂಗವಿಕಲರಿಗೆ ಹಾಗೂ ೮೦ ವರ್ಷ ವಯಸ್ಸು ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಚುನಾವಣಾ ವೀಕ್ಷಕರನ್ನಾಗಿ ೨೪೦೦ ಜನರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸುತ್ತಿದ್ದಂತೆ ಅಭ್ಯರ್ಥಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಎಲ್ಲರೂ ಗೆಲ್ಲುವ ಕುದುರೆಗಳಾಗಿಯೇ ಅಖಾಡಕ್ಕೆ ಇಳಿದಿದ್ದಾರೆ.
ಮತದಾರ ಪ್ರಭುವಿಗೆ ಇದೊಂದು ಅವಕಾಶ ಕೂಡಿ ಬಂದಿದ್ದು ತಂತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅಭ್ಯರ್ಥಿ ಗೆ ಮತ ಚಲಾಯಿಸಲಿದ್ದಾರೆ.