ಬೀದರ: ಬೇಸಿಗೆ ಹೆಚ್ಚಾಗುತ್ತಿದ್ದಂತೆ ಗಡಿ ಜಿಲ್ಲೆ ಬೀದರನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಭಾಲ್ಕಿ ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ಬಿಸಿಲಿನ ತಾಪಮಾನ ಏರುತ್ತಲಿದ್ದು ನೀರಿನ ಮೂಲ ಕಡಿಮೆಯಾಗುತ್ತ ಬರುತ್ತಿದೆ ಹೀಗಾಗಿ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.
ಕ್ಷೇತ್ರದ ಶಾಸಕರು, ಬಡವರ ಬಂಧು ಕಾಯಕ ಯೋಗಿ ಎಂದು ಕರೆಯಲ್ಪಡುವ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಮೊನ್ನೆ ನಡೆದ ವಿಧಾನ ಸಭೆ ಕಲಾಪದಲ್ಲಿ, ನನ್ನ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡಲು ಕನಸನ್ನು ಕಂಡಿದ್ದಾಗಿ ಹೇಳುವ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕ್ಷೇತ್ರದಲ್ಲಿ ಕುಡಿಯುವ ಹನಿ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.
ಗಡಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ (ಕೆ)ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೆರೂರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ.ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಷ್ಟು ಹೇಳಿದರೂ, ಕೇಳಿದರು ಯಾವುದೇ ಪ್ರಯೋಜನವಿಲ್ಲ. ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ಉಂಟಾಗಿದೆ ಎಂಬುದಾಗಿ ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.
ಗ್ರಾಮದಲ್ಲಿ ಕೊಳವೆ ಬಾವಿಯ ಮೋಟಾರ್ ಪಂಪ್ಸೆಟ್ ಕೆಟ್ಟು ಹೋದರು ಕಂಡು ಕಾಣದಂತೆ ಕುರುಡರಂತೆ ವರ್ತಿಸುತ್ತಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಇದ್ದು ಇಲ್ಲದಂತಾಗಿದೆ. ಸುಮಾರು ವರ್ಷ ಕಳೆದು ನಮ್ಮ ಇಡೀ ಜೀವನವೇ ಮುಗಿಯುತ್ತಿದೆ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯ ಮಹಿಳೆಯೊಬ್ಬರು.
ಸರ್ಕಾರದಿಂದ ಕೋಟ್ಯಂತರ ರೂಪಾಯಿ ನೀರಿಗಾಗಿ ನೀಡುತ್ತಿರುವ ಸರ್ಕಾರ.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡುತ್ತಿರುವುದಾದರೂ ಏನು ಎಂಬುದನ್ನು ನೋಡುತ್ತಿಲ್ಲ. ನಮಗೆ ನೀರು ಕೊಡಿ ಇಲ್ಲದಿದ್ದರೆ ಮುಂಬರುವ 2023ರ ವಿಧಾನಸಭಾ ಚುನಾವಣೆ ನಮ್ಮ ಗ್ರಾಮದಿಂದ ಬಹಿಷ್ಕಾರ ಹಾಕುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ಈ ಚುನಾವಣೆಯ ಸಂದರ್ಭದಲ್ಲಾದರೂ ಗ್ರಾಮಸ್ಥರ ನೀರಿನ ಸಮಸ್ಯೆ ಬಗೆಹರಿಯುವುದೋ ಅಥವಾ ಏನೇ ಆದರೂ ನಾಯಿ ಬಾಲ ಡೊಂಕೇ ಎಂಬಂತೆ ಇದೇ ಪರಿಸ್ಥಿತಿ ಮುಂದುವರೆಯುವುದೋ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ