ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ
ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ರವಿವಾರ ಸಂಜೆ ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 14.38 ಲಕ್ಷ ರೂಪಾಯಿಗಳ ಚೆಕ್ ಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಮಹಿಳಾ ಸಮುದಾಯದವರು ಸಹ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕವಾಗಿಯೂ ಸಬಲರಾಗಬೇಕೆನ್ನುವ ಉದ್ದೇಶದಿಂದ ಕಹಾಮ ಹಾಗೂ ರಾಜ್ಯ ಸರಕಾರವು ಜಂಟಿಯಾಗಿ ಈ ಯೋಜನೆಯನ್ನು ಜಾರಿ ಮಾಡಿದೆ ಎಂದು ಹೇಳಿದರು.
ಈಗಾಗಲೇ ತಮ್ಮ ನೇತೃತ್ವದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಅಧಿಕಾರದಲ್ಲಿದ್ದು, ರೈತ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಕ್ಕೂಟಕ್ಕೆ ಹಾಲನ್ನು ಪೂರೈಕೆ ಮಾಡುತ್ತಿರುವ ರೈತರಿಗೆ 20 ದಿನಗಳಲ್ಲಿ ಬಿಲ್ಲನ್ನು ಸಂದಾಯ ಮಾಡುತ್ತಿದ್ದೇವೆ. ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಂತೆಯೂ ರೈತರಲ್ಲಿ ಮನವಿ ಮಾಡಿಕೊಂಡ ಅವರು, ಕಳಪೆ ಮಟ್ಟದ ಹಾಲು ಪೂರೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಮ್ಮ ಒಕ್ಕೂಟಕ್ಕೆ ಬರುತ್ತಿವೆ ಎಂದು ಅವರು ಗಮನ ಸೆಳೆದರು.
ಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯು ನಡೆಯಲಿದ್ದು, ಇದರಲ್ಲಿ ಹಾಲು ಪೂರೈಕೆ ಮಾಡುವ ರೈತ ಫಲಾನುಭವಿಗಳಿಗೆ ಏನಾದರೊಂದು ಹೊಸ ಕೊಡುಗೆ ನೀಡುವ ಸಂಬಂಧ ಚರ್ಚಿಸಲಾಗುತ್ತಿದೆ. ನಮ್ಮ ಒಕ್ಕೂಟಕ್ಕೆ ರೈತರೇ ಶಕ್ತಿಯಾಗಿದ್ದಾರೆ. ರೈತರ ಅಭಿವೃದ್ಧಿಯೇ ನಮಗೆ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತ ಕಲ್ಯಾಣ ಸಂಘದ ವತಿಯಿಂದ ತಲಾ 20 ಸಾವಿರ ರೂ. ಗಳಂತೆ ಒಟ್ಟು 17 ಫಲಾನುಭವಿಗಳಿಗೆ 3.40 ಲಕ್ಷ ರೂಪಾಯಿ, ರಾಸು ವಿಮಾ ಯೋಜನೆಯಲ್ಲಿ ತಲಾ 50 ಸಾವಿರ ರೂ ಗಳಂತೆ ಮೃತಪಟ್ಟ 9 ರಾಸುಗಳ ರೈತ ಕುಟುಂಬಗಳಿಗೆ 4.48 ಲಕ್ಷ ರೂಪಾಯಿ ಹಾಗೂ ಕ್ಷೀರ ಸಂಜೀವಿನಿ 4 ರ ಹಂತದಲ್ಲಿ ನಾಗನೂರು ಬೆಳಗಲಿ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಹೈನು ರಾಸು ಖರೀದಿಗಾಗಿ 6.50 ಲಕ್ಷ ರೂಪಾಯಿಗಳ ಚೆಕ್ ಗಳನ್ನು ವಿತರಿಸಿದರು.
ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಸವಿತಾ ಖಾನಪ್ಪಗೋಳ, ಗೋಕಾಕ ಉಪ ವ್ಯವಸ್ಥಾಪಕ ಡಾ. ವೀರಣ್ಣಾ ಕೌಜಲಗಿ, ವಿಸ್ತರಣಾಧಿಕಾರಿಗಳಾದ ಮುಸ್ತಾಕ ನದಾಫ, ಗೋಪಾಲ ಭಂಡಾರಿ, ಪಾಂಡು ನಂದಿ, ಕ್ಷೀರ ಸಂಜೀವಿನಿ ಅಧಿಕಾರಿ ಮಲಪ್ರಭಾ ಗಾಣಗಿ ಸಹಿತ ಹಲವರು ಉಪಸ್ಥಿತರಿದ್ದರು.