spot_img
spot_img

ಶ್ರೀ ಕ್ಷೇತ್ರ ಹೊಸಗುಂದದಲ್ಲಿ ಲಕ್ಷ ದೀಪೋತ್ಸವ

Must Read

spot_img
- Advertisement -

ಪ್ರಕೃತಿ-ಸಂಸ್ಕೃತಿ – ಭಕ್ತಿ ಯ ನೆಲೆಯಾಗಿರುವ ಹೊಸಗುಂದದಲ್ಲಿ ಡಿಸೆಂಬರ್ 01 ರಿಂದ 03 ರವರೆಗೆ ಮೂರು ದಿನಗಳ ಕಾಲ ಹೊಸಗುಂದ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ.

ಉತ್ಸವದಲ್ಲಿ ಭಗವಂತನ ಉಪಾಸನೆ ಮಾಡಲು ಭಜನೆ ,ನೃತ್ಯ , ಸಂಗೀತ, ಕಲೆ, ಸಂಸ್ಕೃತಿ, ಜಾನಪದ ಕಲೆ ಹಾಗೂ ವಿವಿಧ ವಾದ್ಯಗಳ ಕಲೆಯ ಬಗ್ಗೆ ಕಲಾವಿದರು ವಾದ್ಯಗಳನ್ನು ನುಡಿಸಿ ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.

ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ (ರಿ) ವತಿಯಿಂದ ಕಾರ್ತಿಕ ಕೃಷ್ಣ ದ್ವಾದಶಿ , ತ್ರಯೋದಶಿ , ಚತುರ್ದಶಿ – ಬುಧವಾರ, ಗುರುವಾರ, ಶುಕ್ರವಾರ ದಂದು ಹೊಸಗುಂದ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದ್ದು ಚತುರ್ದಶಿಯ ದಿನ ಅಂದರೆ ಡಿ.3 ರಂದು ಶ್ರೀ ಉಮಾಮಹೇಶ್ವರನಿಗೆ ಲಕ್ಷದೀಪೋತ್ಸವ ಜರುಗಲಿದೆ.

- Advertisement -

ಡಿಸೆಂಬರ್ 01 ರಿಂದ 03 ರ ಒಳಗೆ ಹೊಸಗುಂದಕ್ಕೆ ಭೇಟಿ ನೀಡಿದರೆ, ಪ್ರವಾಸದ ಜೊತೆ ಜೊತೆಗೆ, ಉತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬಹುದು.

ಪ್ರಕೃತಿಯ ಮಡಿಲಲ್ಲಿ ಆಚರಿಸಲ್ಪಡುವ ಹೊಸಗುಂದ ಉತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ (ರಿ) ನ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್ ಶಾಸ್ತ್ರಿ ಮತ್ತು ಡಾ.ವಿ.ಆರ್. ಗೌರಿಶಂಕರ್ ಮತ್ತು ಟ್ರಸ್ಟಿಗಳು ಹಾಗೂ ನಿರ್ದೇಶಕರು ಹಾಗೂ ಕಾರ್ಯ ಕಾರಿ ಮಂಡಳಿ ಸದಸ್ಯರು ಪ್ರೀತಿಯಿಂದ ನಾಡಿನ ಸಮಸ್ತ ಭಕ್ತರನ್ನು ಹಾಗೂ ಪ್ರಕೃತಿಯ ಆರಾಧಕರನ್ನು ಹೊಸಗುಂದಕ್ಕೆ ಆಹ್ವಾನಿಸಿದ್ದಾರೆ.

- Advertisement -

ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದ:

ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಹೊಸಗುಂದ ಉತ್ಸವವು ನಡೆಯಲಿದ್ದು, ಡಿಸೆಂಬರ್ 1 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಹಕಾರದಲ್ಲಿ ಗಿರಿಜನ ಉತ್ಸವ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಲಿದ್ದಾರೆ.

ಜಾನಪದ ನೃತ್ಯ ಸ್ಪರ್ಧೆ:

ಡಿಸೆಂಬರ್ 2 ರಂದು ಹೊಸಗುಂದ ಉತ್ಸವದ ಪ್ರಯುಕ್ತ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಜೆ 4 ಕ್ಕೆ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಸಂಜೆ ೭ಕ್ಕೆ ಯೋಗ ನೃತ್ಯ , ಪ್ರಸಿದ್ಧ ಗಾಯಕ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ, ನಂತರ ಕಲಾಸಿಂಚನ ಬಳಗದಿಂದ ಕೆರೆಗೆ ಹಾರ ನಾಟಕ ಪ್ರದರ್ಶನ ಇರಲಿದೆ.

ಜಲಯೋಗ:

ಡಿಸೆಂಬರ್ 3 ರಂದು ಸಂಜೆ 5.30 ಕ್ಕೆ ವನಶ್ರೀ ಸಂಸ್ಥೆಯಿಂದ ಜಲಯೋಗ, 6 ಕ್ಕೆ ತೇಜಸ್ವಿ ತಬಲಾ ತಂಡ, ಸಾಗರ ಇವರಿಂದ ವಾದ್ಯ ವೈವಿಧ್ಯ, ನಂತರ ವಿದ್ವಾನ್ ಪ್ರದ್ಯುಮ್ನ ಮತ್ತು ತಂಡದವರಿಂದ ಶ್ರೀ ದುರ್ಗಾದೇವಿ ಭರತನಾಟ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ ೮ ಕ್ಕೆ ಲಕ್ಷದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಲಕ್ಷದೀಪೋತ್ಸವಕ್ಕೆ ಚಾಲನೆ:

ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್, ಆಡಳಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶೃಂಗೇರಿ ಪೀಠ ಹಾಗೂ ಅಧ್ಯಕ್ಷರು, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್, ಹೊಸಗುಂದ ಅವರು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವಕ್ಕೆ ಪತ್ರಿಕಾ ಮತ್ತು ಟಿವಿ ಮಾಧ್ಯಮದ ವರದಿಗಾರರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ನ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರೀ ಕೋರಿದ್ದಾರೆ.

ಶ್ರೀ ಕ್ಷೇತ್ರ ಹೊಸಗುಂದ ಶ್ರೀ ಉಮಾ ಮಹೇಶ್ವರ ದೇವಾಲಯದ ಬಗ್ಗೆ: 

ಕರ್ನಾಟಕ ಹಲವು ಪಾರಂಪರಿಕ ತಾಣಗಳ ತವರೂರು, ಅಡಿಕೆಯ ನಾಡು ಎಂದೇ ಕರೆಯುವ ತೀರ್ಥಹಳ್ಳಿ ಅತ್ಯಂತ ಸುಂದರ ತಾಲೂಕುಗಳಲ್ಲಿ ಒಂದು ಅಲ್ಲಿಂದ ಆನಂದಪುರಂ ಮಾರ್ಗದಲ್ಲಿ ಸಂಚರಿಸಿ ಆನಂದಪುರಂ ನಿಂದ 8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿ.ಮೀ. ಕ್ರಮಿಸಿದರೆ ಸಿಗುವ ಪುಟ್ಟ ಗ್ರಾಮ ಹೊಸಗುಂದ.

ಹೊಸಗುಂದ ಕೇವಲ ಪೂಜಾ ಸ್ಥಳವಲ್ಲ, ಅದು ಪ್ರಕೃತಿ ಪ್ರಿಯರಿಗೆ ಶಾಂತಿಯ ವಾಸಸ್ಥಾನ, ಅಲ್ಲಿನ 600 ಎಕರೆಗೂ ವಿಸ್ತಾರವಾದ ದಟ್ಟಾರಣ್ಯದಲ್ಲಿ ದೇವಾಲಯ ನಗರಿ ತೆರೆದುಕೊಂಡಿದೆ.

ಶ್ರೀ ಉಮಾ ಮಹೇಶ್ವರ ದೇವಾಲಯವು ಶಿಲಾಮಯ ವಾಗಿದ್ದು ಇಲ್ಲಿನ ಫಲಕಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು ,ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆ – ಜೊತೆಗೆ ಮಿಥುನ ಶಿಲ್ಪ ಗಳು ಮನೋಹರವಾಗಿದ್ದು ದೇವಾಲಯವು ಪೂರ್ವಾಭಿಮುಖವಾಗಿದೆ.

ದೇವಾಲಯ 21 ಮೀಟರ್ ಉದ್ದವಿದ್ದು 9 ಮೀಟರ್ ಅಗಲವಿದೆ. ದೇವಾಲಯದ ಪೂರ್ವ ಮತ್ತು ದಕ್ಷಿಣ ಬದಿಗಳಲ್ಲಿ ಪ್ರವೇಶದ್ವಾರವಿದೆ .ಕಲ್ಯಾಣ ಚಾಲುಕ್ಯ ಕಾಲದ ಸ್ಥಂಭ ಮಾದರಿಗಳಲ್ಲಿ ಒಂದಾದ ಪುಷ್ಪದ ಫಲಕಗಳಿವೆ. ದೇವಾಲಯದ ವಾಸ್ತು ಶಿಲ್ಪ, ಲಕ್ಷಣ ಮತ್ತು ಶೈಲಿಯನ್ನು ಅವಲೋಕನ ಮಾಡಿದಾಗ 12 ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಾಣ ಮಾಡಿದ ದೇವಾಲಯವೆಂದು ಹೇಳಬಹುದು.

ದೇವಾಲಯದ ಸುತ್ತಲೂ ಕೃಷ್ಣನ ಬಾಲಲೀಲೆಗಳು , ರತಿ ಮನ್ಮಥ, ಸಂನ್ಯಾಸಿ, ದರ್ಪಣಸುಂದರಿ, ಮತ್ಸ್ಯ ಕನ್ಯೆ, ಬೇಟೆಗಾರರು, ಬೇಟೆಯ ಸನ್ನಿವೇಶ , ವಾದ್ಯಗಾರರು , ನೃತ್ಯ ಭಂಗಿಗಳು ಮುಂತಾದ ಸಾಮಾಜಿಕ ಜೀವನವನ್ನು ಬಿಂಬಿಸುವ ಶಿಲ್ಪಗಳನ್ನು ಕೆತ್ತಲಾಗಿದೆ.

ಸನ್ನಿಧಾನ: ಶ್ರೀ ಉಮಾ ಮಹೇಶ್ವರ ದೇವಾಲಯ , ಶ್ರೀ ಪ್ರಸನ್ನ ನಾರಾಯಣ ದೇವಾಲಯ, ಶ್ರೀ ಕಂಚಿ ಕಾಳಮ್ಮ ದೇವಾಲಯ , ಶ್ರೀ ಲಕ್ಷ್ಮೀ ಗಣಪತಿ ದೇವಾಲಯ ಹಾಗೂ ಪರಿವಾರ ದೇವತೆಗಳಾದ ಕದಂಬ ನಾಗರ ಮಾದರಿಯ ಚಿಕ್ಕ ಗುಡಿಯಲ್ಲಿ ಶ್ರೀ ವೀರಭದ್ರ ದೇವರು ಮತ್ತು ಶ್ರೀ ಗಣೇಶ – ಸುಬ್ರಹ್ಮಣ್ಯ ಮತ್ತು ಮಹಿಷಮರ್ದಿನಿ ದೇವತೆಗಳ ಸಾನ್ನಿಧ್ಯವಿತ್ತು ಎಂದು ಅಷ್ಟ ಮಂಗಲ ಪ್ರಶ್ನೆಯಿಂದ ತಿಳಿದು ಬಂದಿದ್ದು ಈಗ ದೇವಾಲಯಗಳು ನಿರ್ಮಾಣವಾಗಿದೆ .

ಹೊಸಗುಂದ ಇತಿಹಾಸ: ದೇವಾಲಯದ ಜೀರ್ಣೋದ್ಧಾರ

ಕ್ರಿ. ಶ.1995 ರಲ್ಲಿ ಶಿವಮೊಗ್ಗದ ಮಲ್ನಾಡ್ ರಿಸರ್ಚ್ ಅಕಾಡೆಮಿಯ ಹೊಸಗುಂದದ ದಿ. ಹೆಚ್.ಡಿ. ನಾಗರಾಜಪ್ಪ ಗೌಡರ ಸಹಕಾರ ದೊಂದಿಗೆ ಇಲ್ಲಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣ ದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಸಿ.ಎಂ.ನಾರಾಯಣ ಶಾಸ್ತ್ರೀಯವರು ದೇವಾಲಯದ ಜೀರ್ಣೋದ್ಧಾರದ ಕೆಲಸವನ್ನು ಪ್ರಾರಂಭ ಮಾಡಿ ಗ್ರಾಮಸ್ಥರನ್ನು ಸೇರಿಸಿ ಶ್ರೀ ಉಮಾಮಹೇಶ್ವರ ಟ್ರಸ್ಟ್ (ರಿ) ಸ್ಥಾಪಿಸಿದರು.

2001 ಮೇ 4 ರಂದು ಕಾಶಿಯಿಂದ ತಂದಿದ್ದ ನರ್ಮದಾ ಬಾಣಲಿಂಗವನ್ನು ಪ್ರತಿಷ್ಠೆ ಮಾಡಲಾಯಿತು. ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶ್ರೀ ಶಾರದಾ ಪೀಠಾಧೀಶ್ವರರ ಅನುಗ್ರಹದಿಂದ ಪ್ರತಿನಿತ್ಯ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ನೆರೆವೇರುತ್ತಿದೆ.

ಪುತ್ತೂರಿನ ಮೂಲದವರಾದ ಸಿ.ಎಂ.ನಾರಾಯಣ ಶಾಸ್ತ್ರಿ ದಂಪತಿ 20 ವರ್ಷಗಳ ಹಿಂದೆ ದೇವಾಲಯ ಸಮೀಪದಲ್ಲಿ ಜಮೀನು ಖರೀದಿಸಿ ವಾಸಿಸಲು ಆರಂಭಿಸಿದರು. ದೇವಾಲಯದ ಪಾಳು ಸ್ಥಿತಿ ಬಗ್ಗೆ ಕಾಳಜಿ ಹೊಂದಿ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿ ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ (ರಿ) ರಚಿಸಿದರು.

ಟ್ರಸ್ಟ್ ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಗೋ ಶಾಲೆ ನಿರ್ಮಾಣ, ನಕ್ಷತ್ರವನ, ಗಿಡಮೂಲಿಕಾ ವನಗಳ ನಿರ್ಮಾಣ , ಹೊಸಗುಂದದ ಅಪರೂಪದ ಸಸ್ಯ ಸಂಪತ್ತುಗಳನ್ನು ಉಳಿಸಿ ಬೆಳಸುವ ಯೋಜನೆ , ಹೊಸಗುಂದ ಕೆರೆಯ ಹೂಳೆತ್ತಿಸಿ ಅಂತರ್ ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆ, ಹೊಸಗುಂದದ 500 ಎಕರೆ ಕಾಡನ್ನು ದೇವರ ಕಾಡು ಎಂದು ಘೋಷಣೆ ಮಾಡಲು ಸರಕಾರದ ಬಳಿ ವಿನಂತಿಸಿ ಕೊಳ್ಳುವುದು ಹಾಗೂ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ ಪ್ರವಾಸಿ ನಗರಿಯನ್ನಾಗಿಸುವುದು ಹತ್ತು ಹಲವಾರು ಯೋಜನೆಗಳನ್ನು ಹೊಂದಿದೆ .

ಹೊಸಗುಂದದ ಬಗ್ಗೆ:

ಕ್ರಿ.ಶ.9 ರಿಂದ 13ನೇ ಶತಮಾನದವರೆಗೆ ಹೊಸಗುಂದ ಶಾಂತರಸರು ಈ ಪ್ರದೇಶದಲ್ಲಿ ಆಡಳಿತ ನಡೆಸಿದ್ದರು ಎಂಬುದು ಇತಿಹಾಸ ಅಧ್ಯಯನಕಾರರಾದ ಅ.ಸುಂದರಂ, ಡಾ.ಜಿ.ವಿ.ಕಲ್ಲಾಪುರ, ಎಸ್.ಜಿ.ಸಾಮಗ ಮತ್ತಿತರರ ಅಧ್ಯಯನ ಶ್ರಮದಿಂದ ದೃಢಪಟ್ಟಿದೆ. ಉತ್ಖನನ ಸಂದರ್ಭದಲ್ಲಿ ನೂತನ ಶಿಲಾಯುಗಕ್ಕೆ ಸೇರಿದ ಕಲ್ಲಿನ ಆಯುಧಗಳು, ಗಂಗರ ಕಾಲದ ನಾಣ್ಯಗಳು ಲಭಿಸಿದ್ದು, ಈ ಸ್ಥಳದ ಪುರಾತನ ವೈಭವವನ್ನು ಅನಾವರಣಗೊಳಿಸಿರುವ ಬಗ್ಗೆ ” ಹೊಸಗುಂದ ಇತಿಹಾಸ ನಿಬಂಧನೆಗಳು ” ಎಂಬ ಗ್ರಂಥದಲ್ಲಿ ಡಾ.ಜಿ.ವಿ.ಕಲ್ಲಾಪುರ (ಗುರುರಾಜ್ ಕಲ್ಲಾಪುರ) ಅವರ ಸಂಪಾದಕತ್ವದಲ್ಲಿ 2001ರಲ್ಲಿ ಪ್ರಥಮ ಆವೃತಿ ಯನ್ನು ಮಲ್ನಾಡ್ ರಿಸರ್ಚ್ ಅಕಾಡೆಮಿ (ರಿ) ಶಿವಮೊಗ್ಗ ಪ್ರಕಟಣೆ ಮಾಡಿದ್ದು ಹೊಸಗುಂದದ ಬಗ್ಗೆ ಹಾಗೂ ಉಮಾಮಹೇಶ್ವರ ದೇವಾಲಯದ ಬಗ್ಗೆ ಈ ಲೇಖನ ಬರೆಯಲು ಡಾ.ಜಿ.ವಿ.ಕಲ್ಲಾಪುರ ಅವರಿಂದ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ಪಡೆದು ಲೇಖನ ಬರೆಯಲಾಗಿದೆ .

ಎಲ್ಲಿದೆ ಹೊಸಗುಂದ?

ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ, ಆನಂದಪುರಂನಿಂದ ಸಾಗರ ಕಡೆ 8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿ.ಮೀ. ಕ್ರಮಿಸಿದರೆ ಪುಟ್ಟ ಗ್ರಾಮ ಹೊಸಗುಂದ ಸಿಗುತ್ತದೆ, ಬೆಂಗಳೂರಿನಿಂದ 330 ಕಿ.ಮೀ ದೂರದಲ್ಲಿದೆ.

ವರ್ಷ ಪೂರ್ತಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ:

ಶಿವರಾತ್ರಿ ಆಚರಣೆ, ವಾರ್ಷಿಕೋತ್ಸವ, ಶ್ರವಾಣ ಮಾಸದ ವಿಶೇಷ ಪೂಜೆ, ನವರಾತ್ರಿ ಆಚರಣೆ.

ಮಾಸ್ಕ್ ಧಾರಣೆ ಕಡ್ಡಾಯ:

ಕೊರೋನಾ ವೈರಸ್ ಇರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತ ದೃಷ್ಟಿಯಿಂದ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಹೊಸಗುಂದ ಉತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ದೇವಾಲಯದ ಆಡಳಿತ ಮಂಡಳಿಯು ವಿನಂತಿಸಿಕೊಂಡಿದೆ.


ಲೇಖನ – ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group