Homeಸುದ್ದಿಗಳುದೈಹಿಕ ಸಾಮಾಜಿಕ ಭಾವನಾತ್ಮಕ ಬೆಳವಣಿಗೆಗೆ ಆಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿ: ಬಿ.ಎನ್.ಬ್ಯಾಳಿ

ದೈಹಿಕ ಸಾಮಾಜಿಕ ಭಾವನಾತ್ಮಕ ಬೆಳವಣಿಗೆಗೆ ಆಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿ: ಬಿ.ಎನ್.ಬ್ಯಾಳಿ

ಸವದತ್ತಿಃ ಬೊಂಬೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗಿದೆ. ಇದರಿಂದ ಮಕ್ಕಳಲ್ಲಿ ದೈಹಿಕ ಸಾಮಾಜಿಕ ಭಾವನಾತ್ಮಕ ಬೆಳವಣಿಗೆಗೆ ಆಗಬಲ್ಲದು. ಮಕ್ಕಳ ಮನಸ್ಸು ಉಲ್ಲಸಿತವಾಗಿರುತ್ತದೆ. ವ್ಯಕ್ತಿಯ ಜ್ಞಾನ ಸಂಚಯ,ಕಾರ್ಯ ವಿಧಾನ,ಆನಂದ ಇವೇ ಮೊದಲಾದ ಭಾವನೆಗಳನ್ನು ಬೊಂಬೆಗಳ ಸಂಭಾಷಣೆ ಕಲ್ಪಿಸುವ ಮೂಲಕ ಪರಿಣಾಮಕಾರಿ ಬೋಧನೆ ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಹೇಳಿದರು

ಅವರು ಸವದತ್ತಿಯ ಗುರ್ಲಹೊಸೂರಿನಲ್ಲಿರುವ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸವದತ್ತಿ ಉತ್ತರ ಸವದತ್ತಿ ದಕ್ಷಿಣ ಗುರ್ಲಹೊಸೂರ. ಕರೀಕಟ್ಟಿ,ಉಗರಗೋಳ, ಹಿರೇಕುಂಬಿ,ಇನಾಂಹೊಂಗಲ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಪಾಠೋಪಕರಣ ಪ್ರದರ್ಶನ ಮೇಳವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಕಲಿತದ್ದು ಮನೋಗತವಾಗಿದ್ದರೆ ಅದನ್ನು ಮರೆಯುವುದು ಕಡಿಮೆ. ಯಾವುದನ್ನೇ ಆಗಲಿ ಕಲಿತ ನಂತರ ನೆನಪಿನಲ್ಲಿಯುಳಿಯಬೇಕೆಂದರೆ ಕಲಿಕೆ ಪರಿಣಾಮಕಾರಿಯಾಗಿರಬೇಕು. ಈ ದಿಸೆಯಲ್ಲಿ ಬೊಂಬೆಗಳ ಮೂಲಕ ವಿವಿಧ ಪಾಠೋಪಕರಣಗಳ ಮೂಲಕ ಕಲಿಕೆ ಜರುಗಿದರೆ ಅದು ಪರಿಣಾಮಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಜರುಗುತ್ತಿರುವ ಕಲಿಕೋಪಕರಣಗಳ ಪ್ರದರ್ಶನದಲ್ಲಿ ಪ್ರದರ್ಶಿತಗೊಳ್ಳುವ ಕಲಿಕೋಪಕರಣಗಳನ್ನು ವಿವಿಧ ಶಾಲೆಗಳವರು ನೋಡಿ ತಮ್ಮ ಶಾಲೆಗಳಲ್ಲಿ ಬಳಕೆ ಮಾಡಿದ್ದಾದರೆ ಸಾರ್ಥಕ” ಎಂದು ಬಿ.ಎನ್.ಬ್ಯಾಳಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಂಯೋಜಕ ಗುರುನಾಥ ಕರಾಳೆ “ಸಂತಸದ ಕಲಿಕೆ ಸ್ವವೇಗದ ಕಲಿಕೆ ನಲಿಕಲಿ ಶಿಕ್ಷಣದ ಅವಿಭಾಜ್ಯ ಅಂಗ ಈ ರೀತಿಯ ಕಲಿಕೆಯಲ್ಲಿ ಕಲಿಕೋಪಕರಣಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಮಾಡಿ ಕಲಿ ನೋಡಿ ತಿಳಿ ಅಂಶ ಪರಿಗಣಿತವಾಗುತ್ತದೆ. ಇಂದು ಒಂದೊಂದು ವಿಷಯದಲ್ಲಿ ಒಂದೊಂದು ರೀತಿಯ ಕಲಿಕೋಪಕರಣ ಪ್ರದರ್ಶನವನ್ನು ಶಿಕ್ಷಕ/ಶಿಕ್ಷಕಿಯರು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡಿರುವ ತಾವು ತಯಾರಿಸಿದ ಬೋಧನೋಪಕರಣಗಳನ್ನು ಪ್ರದರ್ಶಿಸುತ್ತಿದ್ದು ಎಲ್ಲರೂ ತಮ್ಮ ತಮ್ಮ ಬೋಧನೋಪಕರಣಗಳ ಜೊತೆಗೆ ಬೇರೆ ಶಾಲೆಗಳವರು ತಯಾರಿಸಿದ ಬೋಧನೋಪಕರಣಗಳ ಕುರಿತು ಮಾಹಿತಿ ಪಡೆಯುವ ಮೂಲಕ ತಮ್ಮ ಶಾಲೆಗಳಲ್ಲಿ ಅವುಗಳನ್ನು ತಯಾರಿಸಿ ಬೋಧನೆಯಲ್ಲಿ ತೊಡಗಿದ್ದಾದರೆ ಕಲಿಕೆಯ ಫಲ ಸಾರ್ಥಕ”ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ “ಇಂದು ಪ್ರದರ್ಶಿತಗೊಳ್ಳುತ್ತಿರುವ ಕಲಿಕೋಪಕರಣಗಳ ತಯಾರಿಸಿದ ಶಿಕ್ಷಕ/ಶಿಕ್ಷಕಿಯರಲ್ಲಿ ಉತ್ಸಾಹ ಕಂಡು ಬರುತ್ತಿದೆ.ಅವರ ಜೊತೆಗೆ ಮಕ್ಕಳೂ ಕೂಡ ಭಾಗವಹಿಸಿದ್ದು ಅದು ಮಕ್ಕಳಲ್ಲಿ ತಮ್ಮ ಶಿಕ್ಷಕರ ಜೊತೆಗೆ ತಾವೂ ಪಾಲ್ಗೊಂಡಿರುವ ಹರ್ಷ ಇರುತ್ತದೆ.ಇದು ಮಕ್ಕಳು ಮತ್ತು ಶಿಕ್ಷಕರಲ್ಲಿ ಉತ್ಸಾಹ ಇಮ್ಮಡಿಗೊಳಿಸುತ್ತದೆ.ಈ ರೀತಿಯ ಸಂತಸದ ಚಟುವಟಿಕೆಗಳು ನಿರಂತರವಾಗಿ ಜರುಗಲಿ” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ, ರತ್ನಾ ಸೇತಸನದಿ, ಬಿಐಇಆರ್‌ಟಿ ಗಳಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ಡಿ.ಎಲ್.ಭಜಂತ್ರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎನ್.ರಾಮಚಂದ್ರಪ್ಪ, ಕುಶಾಲ ಮುದ್ದಾಪುರ, ಪಿ.ಸಿ.ಫರೀಟ್, ಎಚ್.ಎಲ್.ನದಾಫ್, ಆರ್.ಪಿ.ನಲವಡೆ, ಧರೆಪ್ಪ ಮರಕುಂಬಿ, ಮಂಜುನಾಥ ಗಡೇಕಾರ ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ವಿ.ಕುರಿ, ಶ್ರೀಮತಿ ಪಿ.ಎ.ಹಲಕಿ, ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಎಫ್.ಜಿ.ನವಲಗುಂದ, ಪ್ರಶಾಂತ ಹಂಪನ್ನವರ ಸೇರಿದಂತೆ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.

ಶಾಸಕರ ಮಾದರಿ ಶಾಲೆಯ ಶಿಕ್ಷಕಿ ಎಸ್.ಎಚ್.ಕಾಯಕದ ನಿರೂಪಿಸಿದರು. ಎಂ.ಬಿ.ಕಮ್ಮಾರ ಸ್ವಾಗತಿಸಿದರು. ಪಿ.ಎಸ್.ಶಿಂಧೆ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group