ಸಮಾಜದಲ್ಲಿ ಪತ್ರಕರ್ತರ ಪಾತ್ರದ ಕುರಿತಂತೆ ಆಗಾಗ ಚರ್ಚೆಗಳು ಆಗುತ್ತಲೇ ಇರುತ್ತವೆ. ಪತ್ರಕರ್ತನೆಂದರೆ ನಾಲ್ಕನೆಯ ಅಂಗದ ಸಾರಥಿ, ಪತ್ರಕರ್ತನೆಂದರೆ ಸಮಾಜದ ಅಂಕುಡೊಂಕು ತಿದ್ದುವವನು, ಪತ್ರಕರ್ತನೆಂದರೆ ಹಾಗೆ ಹೀಗೆ…ಅಂತೆಲ್ಲ ಸಮಾಜದ ಜನರು ಮಾತನಾಡುತ್ತಾರೆ. ಕೆಲವು ಪ್ರಭೃತಿಗಳಂತೂ ಪತ್ರಕರ್ತರನ್ನು ಕಂಡರೆ ಸಿಡಿದು ಬೀಳುತ್ತಾರೆ ಯಾಕೆಂದರೆ ಅವರ ದೃಷ್ಟಿಯಲ್ಲಿ ಈ ಪತ್ರಕರ್ತನೇ ಅತ್ಯಂತ ಭ್ರಷ್ಟ ಆಸಾಮಿ ಎಂಬ ಭಾವನೆ ಇರುತ್ತದೆ ! ಅವರನ್ನು ನಕಲಿ ಪತ್ರಕರ್ತರು ಎಂದು ಕರೆಯುತ್ತ ಇವರು ತಾವು ಶೈನ್ ಆಗುತ್ತಿರುತ್ತಾರೆ.
ಇದೆಲ್ಲ ಯಾಕೆ ಬಂತೆಂದರೆ, ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳು ಪತ್ರಕರ್ತರಲ್ಲಿ ಅಸಲಿ ಮತ್ತು ನಕಲಿ ಪತ್ರಕರ್ತರು ಎಂದು ವಿಂಗಡಣೆ ಮಾಡಿದ್ದು, ಹಾಗೂ ಅವರ ಕೊರಳಿಗೆ ಐಡಿ ಎಂಬ ಗಂಟೆ ಕಟ್ಟಲು ಹೊರಟಿದ್ದು.
ಅಷ್ಟಕ್ಕೂ ಪತ್ರಕರ್ತರಲ್ಲಿ ಅಸಲಿ ಎಂದರೆ ಯಾರು, ನಕಲಿ ಎಂದರೆ ಯಾರು ಎಂಬುದು ಬಿಡಿಸಲಾಗದ ಪ್ರಶ್ನೆ ಯಾಕೆಂದರೆ, ಒಬ್ಬ ಪತ್ರಕರ್ತ ಒಂದು ಬೇರೆ ಪತ್ರಿಕೆಗೆ ಬರೆಯುತ್ತಾನೆ ಅದು ಅವನ ಬರಹ ಪ್ರಕಟಿಸಿ ಪ್ರೋತ್ಸಾಹ ನೀಡುತ್ತದೆ. ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ, ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆ, ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ….ಹೀಗೆ ಬರೆದು ಸಮಾಜವನ್ನು ಸರ್ಕಾರವನ್ನು ಎಚ್ಚರಿಸುತ್ತಾನೆ. ಆದರೆ ಆತನಿಗೆ ಯಾವುದೇ ಐಡಿ ಕಾರ್ಡ್ ಇಲ್ಲ, ಸ್ವಂತದ್ದೆನ್ನುವ ಪತ್ರಿಕೆಯಿಲ್ಲವೆಂದರೆ ಆತ ನಕಲಿ ಆದನೆ ? ಇನ್ನು ಸ್ವಂತ ಪತ್ರಿಕೆಯ ಇಟ್ಟುಕೊಂಡವನಿಗೆ ಸರಿಯಾಗಿ ಬರೆಯಲು ಬರುವುದಿಲ್ಲ. ಯಾವುದೇ ಜ್ಞಾನವೂ ಇಲ್ಲ. ಹೆಸರಿಗೊಂದು ಪತ್ರಿಕೆಯಿದೆ. ಐಡಿ ಕಾರ್ಡ್ ಇದೆ. ಆತ ಅಸಲಿಯಾದನೆ ? ಈ ಜಿಲ್ಲಾಧಿಕಾರಿಗಳು ಕೊಟ್ಟ ಗುರುತಿನ ಚೀಟಿ ಇಟ್ಟುಕೊಂಡೇ ಆತ ಸುಲಿಗೆಗೆ ಇಳಿದರೆ ಏನು ಗತಿ? ಏನು ಈ ಅಸಲಿ, ನಕಲಿ ಪತ್ರಕರ್ತರ ವ್ಯಾಖ್ಯಾನ?
ಪೀತ ಪತ್ರಿಕೋದ್ಯಮ ಎಂಬುದೊಂದು ಇದೆ. ಈ ಶಬ್ದವನ್ನು ಯಾರು ಹುಟ್ಟುಹಾಕಿದರೋ ಗೊತ್ತಿಲ್ಲ. ಆದರೆ ಭ್ರಷ್ಟ ಅಧಿಕಾರಿಗಳ ಮುಖವಾಡ ಕಳಚಬೇಕಾದ ಪತ್ರಕರ್ತರು ಅವರೊಡನೆ ಕಾಂಪ್ರಮೈಸ್ ಆಗಿ ದುಡ್ಡು ವಸೂಲು ಮಾಡುತ್ತಿದ್ದಾರೆಂಬ ಆರೋಪ ಮಾಡಿ ಅಂಥವರನ್ನು ಪೀತ ಪತ್ರಕರ್ತರು ಎಂದರೆನ್ನುವುದು ನಮಗರ್ಥವಾಗಿದ್ದು. ಇರಬಹುದು. ಆದರೆ ತಾವು ಭ್ರಷ್ಟಾಚಾರ ಮಾಡಿದ್ದನ್ನು ಕಂಡ ಪತ್ರಕರ್ತನೊಬ್ಬ ಅದನ್ನೇ ಪತ್ರಿಕೆಯ ಮೂಲಕ ಸಮಾಜಕ್ಕೆ, ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದಾಗ ಆತನಿಗೆ ದುಡ್ಡಿನ ಆಮಿಷವೊಡ್ಡಿ ಬಲೆಗೆ ಹಾಕಿಕೊಂಡು ತನ್ನ ಭ್ರಷ್ಟ ಕಾಯಕವನ್ನೇ ಮುಂದುವರೆಸುವ ಅಧಿಕಾರಿಯನ್ನು ಏನೆನ್ನಬೇಕು. ಅಫ್ ಕೋರ್ಸ್ ಭ್ರಷ್ಟನೆನ್ನಬಹುದು. ಆದರೆ ಸದರಿ ಶಬ್ದ ಎಲ್ಲರ ಕಿವಿಯ ಮೇಲೆ ಬಿದ್ದು ನಾರ್ಮಲ್ ಪದವಾಗಿದೆಯಲ್ಲ. ಎಲ್ಲರೂ ಅವರೇ ಬಿಡು ಎಂಬ ಸಮಾಜದ ನಿರ್ಲಕ್ಷ್ಯ ಧೋರಣೆ ಪತ್ರಕರ್ತರಿಗೂ ತಟ್ಟಿದ್ದು ಅವರನ್ನೂ ಭ್ರಷ್ಟರನ್ನಾಗಿ ಮಾಡಿದ್ದು ಸುಳ್ಳಲ್ಲ.
ಇತ್ತೀಚೆಗೆ ತಾನು ಭ್ರಷ್ಟನಾಗಿದ್ದರೂ, ಹೆಜ್ಜೆ ಹೆಜ್ಜೆಗೂ ಸರ್ಕಾರಿ ಸೌಲಭ್ಯಗಳ ದುರುಪಯೋಗ ಮಾಡಿಕೊಂಡು, ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ ವಸೂಲಿ ದಂಧೆಗೆ ಇಳಿದಿದ್ದ ವ್ಯಕ್ತಿ ಒಬ್ಬ ಪತ್ರಕರ್ತನನ್ನು ನಕಲಿ ಪತ್ರಕರ್ತ ಎಂದು ಕರೆದ ಕಾರಣ ಆತನಿಗೆ ಪತ್ರಿಕಾ ಧರ್ಮದ ರುಚಿ ತೋರಿಸಬೇಕಾಯಿತು.ಸರ್ಕಾರಿ ಅಧಿಕಾರಿಗಳನ್ನು ಹೆದರಿಸಲು ಆತ ಬಳಸುತ್ತಿದ್ದ ಅಸ್ತ್ರವನ್ನೇ ಆತನ ವಿರುದ್ಧ ಬಳಸಿ ಬಾಲ ಮುದುರಿಕೊಂಡು ಕುಳಿತುಕೊಳ್ಳುವಂತೆ ಮಾಡಲಾಯಿತು. ಇದು ಪತ್ರಿಕಾ ಕರ್ತರ ಕೆಲಸ. ತಮ್ಮನ್ನು ನಕಲಿ ಎನ್ನುವವರಿಗೆ ದಿಟ್ಟ ಉತ್ತರವನ್ನು ಬರವಣಿಗೆಯ ಮೂಲಕವೇ ನೀಡಬೇಕು.
ತಮ್ಮನ್ನು ಭ್ರಷ್ಟರನ್ನಾಗಿಸುವುದೂ ಅವರೇ, ನಕಲಿ ಎಂದು ಕರೆಯುವವರೂ ಅವರೇ ಎಂಬ ಎಚ್ಚರಿಕೆ ಇರಬೇಕು. ಸ್ವತಃ ಭ್ರಷ್ಟನಾಗಿರುವ ಯಾವನೇ ಇರಲಿ ಆತನಿಗೆ ಪತ್ರಕರ್ತರನ್ನು ನಕಲಿ ಅಸಲಿ ಎಂಬ ವಿಂಗಡಣೆ ಮಾಡುವ ಯಾವುದೇ ಅಧಿಕಾರವಿಲ್ಲ. ಬೇಕಾದರೆ ತಮ್ಮನ್ನು ಬ್ಲಾಕ್ ಮೇಲ್ ಮಾಡುವ ಪತ್ರಕರ್ತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ತಾನು ಶುದ್ಧವಾಗಿದ್ದೇನೆ ಎಂಬುದನ್ನು ತೋರಿಸಿಕೊಡಲಿ ಅದನ್ನು ಬಿಟ್ಟು ಪತ್ರಕರ್ತರನ್ನು ಸಮಾಜಕ್ಕೆ ಕಂಟಕ ಎಂದು ಬಿಂಬಿಸುವುದು ಅಪರಾಧ.
ಉಮೇಶ ಬೆಳಕೂಡ, ಮೂಡಲಗಿ