ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯನವರಿಂದ ಚಾಲನೆ ದಿ.16 ರಿಂದ ಜಿಲ್ಲೆಯಾದ್ಯಂತ ಚಾಲುಕ್ಯ ರಥಯಾತ್ರೆ
ಬಾಗಲಕೋಟೆ : ಬಾದಾಮಿ ಐತಿಹಾಸಿಕ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿಯಾಗಿ ಚಾಲನೆ ನೀಡಲಿದ್ದು, ಉತ್ಸವದ ಅಂಗವಾಗಿ ಜನವರಿ 16 ರಿಂದ ಚಾಲುಕ್ಯ ರಥಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಹೇಳಿದರು.
ಬಾದಾಮಿ ನಗರದ ಖಾಸಗಿ ಹೊಟೆಲ್ ನಲ್ಲಿ ಸೋಮವಾರ ಜರುಗಿದ ಚಾಲುಕ್ಯ ಉತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಲುಕ್ಯರ ಗತವೈಭವ ಸ್ಮರಿಸುವ ನಿಟ್ಟಿನಲ್ಲಿ ಜನವರಿ 19 ರಿಂದ 21 ವರೆಗೆ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆಯಲ್ಲಿ ಜರುಗಲಿರುವ ಉತ್ಸವದಲ್ಲಿ ಸ್ಥಳೀಯರು ಸೇರಿದಂದೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಜನರು ಪಾಲ್ಗೊಳ್ಳುವರು ಆದ್ದರಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉತ್ಸವ ಆಚರಣೆ ಕುರಿತು ಸಲಹೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಸ್ವೇತಾ ಬೀಡಿಕರ ಸೇರಿದಂತೆ ವಿವಿಧ ಸಮಿತಿಯ ಜಿಲ್ಲಾನಟ್ಟದ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

