ಮಲ್ಲಿಗೆಯ ತೋಟಕ್ಕೆ ಬೇಲಿ ಹಾಕಲುಬಹುದು
ಸೂಸುವ ಸುವಾಸನೆಯ ತಡೆಯಬಹುದೆ ?
ಏಸುಬುದ್ಧಕಬೀರ ಬಸವನಾನಕರೊರೆದ
ಮೌಲ್ಯಗಳು ಮನುಕುಲಕೆ – ಎಮ್ಮೆತಮ್ಮ|
ಶಬ್ಧಾರ್ಧ
ಒರೆದ = ಹೇಳಿದ
ತಾತ್ಪರ್ಯ
ಮಲ್ಲಿಗೆ ಹೂವಿನ ಬಳ್ಳಿಯನ್ನು ತೋಟದಲ್ಲಿ ಬೆಳೆಸಿ ದನ
ತಿನ್ನದಂತೆ ಜನ ಹೂ ಕದಿಯದಂತೆ ಸುತ್ತೆಲ್ಲ ಮುಳ್ಳಿನ
ಬೇಲಿ ಹಾಕಿ ರಕ್ಷಿಸಿಕೊಳ್ಳಬಹುದು. ಆದರೆ ಮಲ್ಲಿಗೆ ಹೂವು
ಅರಳಿ ಪರಿಮಳ ಪಸರಿಸಿದಾಗ ಅದನ್ನು ಪಕ್ಕದಲ್ಲಿಯ
ಹೊಲಗಳಿಗೆ ಹೋಗದಂತೆ ತಡೆದು ನಿಲ್ಲಿಸಲು ಅಸಾಧ್ಯ.
ಸುಗಂಧ ಗಾಳಿಯಲ್ಲಿ ಬೆರೆತು ಸುತ್ತಮುತ್ತ ಹರಡುತ್ತದೆ.
ಸುವಾಸನೆ ಹರಡುವುದು ಅದರ ಗುಣ.ಅದನ್ನು ತಡೆಯಲು
ಯಾರಿಂದಲು ಆಗುವುದಿಲ್ಲ. ಅದು ಎಲ್ಲಡೆ ಹರಡಿ ಮನಕೆ
ಆನಂದವನ್ನು ಕೊಡುತ್ತದೆ. ಆ ಹೂವನ್ನು ಎಲ್ಲರು ಅದರ
ಸುಗಂಧ ಗುಣದಿಂದಾಗಿ ಇಷ್ಟಪಡುತ್ತಾರೆ.
ಹಾಗೆ ಜಗತ್ತಿನ ಮಹಾಮಾನವರಾದ ಏಸುಕ್ರಿಸ್ತ, ಗೌತಮ ಬುದ್ಧ, ಕಬೀರದಾಸ ಜಗಜ್ಯೋತಿ ಬಸವೇಶ್ವರ ಗುರುನಾನಕ ಮುಂತಾದವರು ಅವರ ಧರ್ಮಕ್ಕಷ್ಟೆ ಸೇರಿದವರಲ್ಲ. ಜಗತ್ತಿನ ಎಲ್ಲ ಮಾನವ ಜನಾಂಗಕ್ಕೆ ಸೇರಿದವರು.ಅವರ ಬೋಧನೆಗಳು ಬರಿಯ ಕ್ರೈಸ್ತರಿಗೆ, ಬೌದ್ಧರಿಗೆ, ಹಿಂದುಗಳಿಗೆ, ಲಿಂಗಾಯತರಿಗೆ, ಸಿಖ್ಖರಿಗೆ ಮಾತ್ರವಲ್ಲ. ಅವು ಎಲ್ಲ ಮಾನವಕುಲಕ್ಕೆ ಸೇರಿದ ತತ್ತ್ವಗಳು. ಮಾನವಕುಲ ಶಾಂತಿ,ನೆಮ್ಮದಿ, ಸಮಾಧಾನ, ಸಂತೋಷದಿಂದ ಬಾಳಲಿಕ್ಕೆ ಹೇಳಿದ ನುಡಿಮುತ್ತುಗಳು.ಎಲ್ಲ ಧರ್ಮಸ್ಥಾಪಕರು ಮಾನವ ಪ್ರೀತಿ ವಿಶಾಲ ಮನೋಭಾವನೆ ಬೋಧಿಸಿರುವರು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ