ಬೆತ್ತಲೆಯ ರಾಜ್ಯದಲಿ ಬಟ್ಟೆಯನು ತೊಟ್ಟವನ
ನೋಡಿ ನಗುವರು ಜನರು ಹುಚ್ಚನೆಂದು
ಹೀಗಿರುವ ಜನರಿಂದ ತುಂಬಿರುವ ಲೋಕದಲಿ
ಹುಚ್ಚನಂತಿಹುದೊಳಿತು – ಎಮ್ಮೆತಮ್ಮ
ಶಬ್ಧಾರ್ಥ
ಒಳಿತು – ಲೇಸು, ಒಳ್ಳೆಯದು
ತಾತ್ಪರ್ಯ
ಬಟ್ಟೆ ಧರಿಸದೆ ಬರಿಮೈಯ್ಯಲ್ಲಿರುವ ಜನರಿರುವ ಕಾಡುಜನರ ರಾಜ್ಯದಲ್ಲಿ ಬಟ್ಟೆ ತೊಟ್ಟವನ ಕಂಡು ನಗುತ್ತಾರೆ ಮತ್ತು ಹುಚ್ಚನೆಂದು ಕರೆಯುತ್ತಾರೆ. ಸಂಸ್ಕೃತಿ ನಾಗರಿಕತೆ ಇಲ್ಲದ ಜನರ ಮಧ್ಯೆ ಬದುಕುವುದು ಬಹಳ ಕಷ್ಟ. ನಾವು ಸಭ್ಯರಾಗಿ ಇದ್ದರೆ ಅವರಿಗೆ ನಾವು ವಿಚಿತ್ರವಾಗಿ ಕಾಣುತ್ತೇವೆ. ಲಂಚರುಷುವತ್ತು ಪಡೆದು ಜೀವಿಸುವ ಜನರ ಮಧ್ಯೆ ಪ್ರಾಮಾಣಿಕ ಮನುಷ್ಯನಾಗಿ ಇರುವ ಮನುಷ್ಯನನ್ನು ಮೂರ್ಖನೆಂದು ಬಗೆಯುತ್ತಾರೆ. ಮುಂದೊಂದು ದಿನ ಇಂಥ ಜನರಿಂದ ಆಯ್ಕೆಯಾಗಿ ಹೋದ ಸದಸ್ಯರು ಬರಿಬತ್ತಲೆ ತಿರುಗುವುದನ್ನು ಮತ್ತು ಲಂಚ ಕೊಳ್ಳುವುದನ್ನು ಪ್ರೋತ್ಸಾಹಿಸಿ ಕಾನೂನು ಸಹ ಮಾಡಬಹುದು.
ಅವರು ಏನೇ ಮಾಡಲಿ , ನಕ್ಕು ಅಪಹಾಸ್ಯ ಮಾಡಲಿ ನಾವು ನಮ್ಮ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು. ಅವರು ಹುಚ್ಚನೆಂದು ಕರೆದರೆ ಕರೆಯಲಿ ನಮ್ಮತನವನ್ನು ಬಿಡಬಾರದು. ಈ ಜಗದ ಜನರು ಮೆಚ್ಚದಿದ್ದರೇನು. ಆ ದೇವಮೆಚ್ಚುವಂತೆ ಬದುಕಬೇಕು. ಮೆಚ್ಚಿದರಾಯಿತು ಮೇಲಿನದೈವ ಅವರ ಅಪಹಾಸ್ಯ ಅವಮಾನಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹುಚ್ಚನಂತೆ ಬದುಕುವುದು ಒಳಿತು. ಕಳ್ಳನಾಗಿ ಬದುಕುವುದಕ್ಕಿಂತ ಒಳ್ಳೆಯವನಾಗಿ ಬದುಕುವುದು ಲೇಸು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990