ಎಲ್ಲ ಜನರಿಗೆ ಬೇಕು ನಕ್ಕು ನಗಿಸುವ ಧರ್ಮ
ಈ ಧರ್ಮದೊಳಗಿಲ್ಲ ಜಾತಿಪಂಥ
ಸಂತೋಷಪಡಿಸುವುದೆ ನಿಜವಾದ ಶಿವಪೂಜೆ
ಬಲ್ಲವರ ಮಾತಿಷ್ಟೆ – ಎಮ್ಮೆತಮ್ಮ
ತಾತ್ಪರ್ಯ
ಪಂಥ – ಮತ. ಬಲ್ಲವರು = ತಿಳಿದವರು, ಜ್ಞಾನಿಗಳು
ನಗು ಮಾನವನಿಗೆ ದೇವರು ಕೊಟ್ಟ ವರ. ಏಕೆಂದರೆ
ಯಾವ ಪ್ರಾಣಿಗಳಲ್ಲಿಲ್ಲದ ನಗು ಮಾನವನಲ್ಲಿ ಮಾತ್ರ ಇದೆ.
ನಗಿಸುವವನನ್ನು ಎಲ್ಲ ಜನರು ಇಷ್ಟಪಡುತ್ತಾರೆ. ಇದು
ಕೂಡ ಧರ್ಮವೆ. ಏಕೆಂದರೆ ಧರ್ಮಗಳೆಲ್ಲ ಮಾನವನಿಗೆ
ಸುಖಶಾಂತಿ ಕೊಡುವಂತೆ ಇದು ಕೂಡ ಸುಖ ಶಾಂತಿ ನೆಮ್ಮದಿಯನ್ನು ಕೊಡುತ್ತದೆ. ಆದರೆ ಬೇರೆ ಧರ್ಮಗಳಲ್ಲಿ
ಇರುವ ಮೇಲು,ಕೀಳು ವರ್ಗ,ವರ್ಣ,ಬಡವ ,ಬಲ್ಲಿದ ,ಜಾತಿ, ಮತ, ಪಂಥ ಪಂಗಡಗಳು ಈ ನಗಿಸುವ ಧರ್ಮದಲ್ಲಿ
ಇಲ್ಲವೇ ಇಲ್ಲ. ಈ ಧರ್ಮದಲ್ಲಿ ಯಾರು ಗುಡಿ,ಚರ್ಚು,ಮಠ,
ಮಸೀದಿ, ಬಸದಿಗಳಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸಬೇಕಾಗಿಲ್ಲ. ಇದ್ದಲ್ಲೆ ಜನರನ್ನು ನಗಿಸಿದರೆ ಸಾಕು
ಅದು ಶಿವಪೂಜೆಗೆ ಸಮಾನವಾದುದು ಎಂದು ತಿಳಿದಂಥ
ಜ್ಞಾನಿಗಳು ಹೇಳುತ್ತಾರೆ. ಅದನ್ನೆ ಸುಭಾಷಿತ ಹೇಳುತ್ತದೆ.
ಯೇನಕೇನ ಪ್ರಕಾರೇಣಾ
ಯಸ್ಯ ಕಸ್ಯಾಪಿ ದೇಹಿನಃ
ಸಂತೋಷ ಜನೆಯೇತ್ ಪ್ರಾಜ್ಞಾಃ
ತದೇವೀಶ್ವರ ಪೂಜನಂ
ಏನಾದರು ಮಾಡಿ ಎಂತಾದರು ಮಾಡಿ ಜೀವಿಗಳ ಮನ
ಸಂತೋಷಪಡಿಸುವುದೆ ಈಶ್ವರನ ಪೂಜೆ ಎಂದು ಪ್ರಾಜ್ಞರು
ಹೇಳುತ್ತಾರೆ. ನಗುವುದರಿಂದ ಮಾನಸಿಕ ಒತ್ತಡ ಇಳಿದು
ಶಾಂತಿನೆಮ್ಮದಿ ದೊರಕುತ್ತದೆ. ಅದಕ್ಕೆ ನಗೋಣ; ನಗಿಸೋಣ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990