ಗೋಕಾಕ- ಹೈನುಗಾರ ರೈತರಿಗೆ ಅನುಕೂಲವಾಗಲು ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಬಲವರ್ಧನೆಯನ್ನು ಹೆಚ್ಚಳ ಮಾಡಿಕೊಳ್ಳುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಸಮುದಾಯಕ್ಕೆ ಸಲಹೆ ಮಾಡಿದರು.
ಶನಿವಾರದಂದು ಇಲ್ಲಿಯ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಗೊಕಾಕ- ಮೂಡಲಗಿ ಉಪ ಕೇಂದ್ರದಿಂದ ರೈತ ಫಲಾನುಭವಿಗಳಿಗೆ ಒಟ್ಟು ೭.೧೫ ಲಕ್ಷ ರೂಪಾಯಿಗಳ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಜಿಲ್ಲಾ ಹಾಲು ಒಕ್ಕೂಟವನ್ನು ಮಾದರಿ ಮಾಡುವ ಸಂಕಲ್ಪ ಇಟ್ಟುಕೊಂಡಿರುವುದಾಗಿ ಅವರು ತಮ್ಮ ಮಹಾದಾಸೆಯನ್ನು ವ್ಯಕ್ತಪಡಿಸಿದರು.
ರೈತರ ಸಂಕಷ್ಟ ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಕೃಷಿ ಪ್ರಧಾನ ರಾಷ್ಟ್ರವಾಗಿರುವ ನಮ್ಮ ದೇಶವು ನಿಂತಿರುವುದೇ ರೈತರಿಂದ. ರೈತ ಸುಖವಾಗಿರಬೇಕು ಎಂಬ ದೃಷ್ಟಿಕೋನದಿಂದ ಕಳೆದ ಮಾರ್ಚ ತಿಂಗಳಲ್ಲಿ ರಾಜ್ಯದ ಹೆಮ್ಮೆಯ ನಂದಿನಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಎಮ್ಮೆ ಮತ್ತು ಆಕಳು ಹಾಲಿನ ಬೆಲೆಯಲ್ಲಿ ಕ್ರಮವಾಗಿ ೩.೪೦ ರೂಪಾಯಿ ಮತ್ತು ಒಂದು ರೂಪಾಯಿಯನ್ನು ಹೆಚ್ಚಿಸಲಾಗಿದ್ದು, ಇದನ್ನು ಸಂಪೂರ್ಣವಾಗಿ ನಮಗೆ ಹಾಲು ಪೂರೈಸುತ್ತಿರುವ ಹೈನುಗಾರ ರೈತರಿಗೆ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯ ಆದಾಯಕ್ಕಿಂತ ನಮಗೆ ಹೈನುಗಾರರ ಏಳ್ಗೆಯೇ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಬೆಮ್ಯುಲ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಂಸ್ಥೆಯು ಲಾಭದತ್ತ ಮುನ್ನುಗ್ಗುತ್ತಿದೆ. ಲಾಭಾಂಶವೂ ಕೂಡ ಪ್ರತಿ ಮಾಹೆಯಲ್ಲಿ ಹೆಚ್ಚಳವಾಗುತ್ತಿದೆ. ಒಟ್ಟಿನಲ್ಲಿ ಈ ತಿಂಗಳಾ೦ತ್ಯಕ್ಕೆ ರೂಪಾಯಿ ೫ ರಿಂದ ೭ ಕೋಟಿ ತನಕ ಲಾಭವನ್ನು ನಿರೀಕ್ಷಿಸಲಾಗಿದೆ. ಇದಕ್ಕೆ ರೈತ ಸಮುದಾಯ, ಗ್ರಾಹಕ ಮಿತ್ರರು ಮತ್ತು ಸಂಸ್ಥೆಯಲ್ಲಿ ಅಹೋರಾತ್ರಿ ದುಡಿಯುತ್ತಿರುವ ಸಿಬ್ಬಂದಿಗಳ ಪಾತ್ರ ಅಪಾರವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು, ೧೦ ರೈತ ಫಲಾನುಭವಿಗಳಿಗೆ ರಾಸು ವಿಮೆ ಯೋಜನೆಯಡಿ ತಲಾ ೫೦ ಸಾವಿರ ರೂ.ಗಳಂತೆ ೫ ಲಕ್ಷ ರೂಪಾಯಿ, ೯ ಜನ ರೈತರಿಗೆ ರೈತ ಕಲ್ಯಾಣ ಸಂಘದಿಂದ ತಲಾ ೨೦ ಸಾವಿರ ರೂಪಾಯಿ, ಇಬ್ಬರು ರೈತರಿಗೆ ರೈತ ಕಲ್ಯಾಣ ಸಂಘದಿಂದ ಒಟ್ಟು ೩೫ ಸಾವಿರ ರೂಪಾಯಿ ಸೇರಿದಂತೆ ಒಟ್ಟಾರೆಯಾಗಿ ೭.೧೫ ಲಕ್ಷ ರೂಪಾಯಿಗಳ ಚೆಕ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಗೋಕಾಕ- ಮೂಡಲಗಿ ಉಪ ಕೇಂದ್ರದ ಅಧಿಕಾರಿ ಡಾ.ವೀರಣ್ಣಾ ಕೌಜಲಗಿ, ಉಪ ಕೇಂದ್ರದ ಇತರೆ ಅಧಿಕಾರಿಗಳು, ರೈತ ಬಾಂಧವರು ಉಪಸ್ಥಿತರಿದ್ದರು.