ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಒಂಬತ್ತು ದಿನಗಳ ನಾಟಕೋತ್ಸವದಲ್ಲಿ ೩ನೇ ದಿನ ಭಾನುವಾರ ಹಾಸನದ ಶ್ರೀ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಅಧ್ಯಕ್ಷ ಡಿ.ವಿ.ನಾಗಮೋಹನ್ ನೇತೃತ್ವದಲ್ಲಿ ಬೆಳ್ಳೂರು ಕ್ರಾಸ್ ಡಿ.ಸಿ.ಪುಟ್ಟರಾಜು ನಿರ್ದೇಶನದಲ್ಲಿ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶಿಸಿದರು.
ಹಿರಿಯ ರಂಗನಟರು ಗಾಡೇನಹಳ್ಳಿ ಕೃಷ್ಣೇಗೌಡರು ಮಾತನಾಡಿ ಒಂದು ಪೌರಾಣಿಕ ನಾಟಕ ಪ್ರದರ್ಶಿಸಲು ಒಂದೂವರೆಯಿಂದ ಎರಡು ಲಕ್ಷ ರೂ. ಖರ್ಚು ಬರುತ್ತಿದೆ. ಕಲಾವಿದರು ಕಲಾತಂಡಗಳು ಈ ಖರ್ಚನ್ನು ಭರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಕಲಾತಂಡಗಳು ಒಟ್ಟಾಗಿ ನಾಟಕೋತ್ಸವ ಸಂಘಟಿಸಿ ಮಂಡ್ಯದ ನ್ಯೂ ಇಂದ್ರ ಡ್ರಾಮ ಸೀನರಿಯವರು ಇಲ್ಲೇ ಮೊಕ್ಕಂ ಮಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಸರ್ಕಾರ ಕಲಾತಂಡಗಳನ್ನು ಧನಸಹಾಯ ಒದಗಿಸಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಈ ಎಲ್ಲಾ ಕಷ್ಟಸಂಕಷ್ಟಗಳ ನಡುವೆ ಕಲಾವಿದರು ನಾಟಕ ಪ್ರದರ್ಶನಕ್ಕೆ ತಯಾರಿ ನಡೆಸಿ ರಂಗಕಲೆ ಉಳಿವಿಗೆ ಪ್ರಯತ್ನಶೀಲರಾಗಿದ್ದಾರೆ. ಪ್ರೇಕ್ಷಕರು ಹೆಚ್ಚಾಗಿ ಆಗಮಿಸಿ ನಾಟಕ ನೋಡಿ ಪ್ರೋತ್ಸಾಹಿಸಿದ್ದಲ್ಲಿ ಕಲಾವಿದರಿಗೆ ಅದುವೇ ಸಂತೋಷ ಎಂದರು
ನಾಟಕಕಾರ ಗೊರೂರು ಅನಂತರಾಜು ಮಾತನಾಡಿ, ವಂಡರಬಾಳು ಎಸ್. ಲಿಂಗರಾಜೇ ಅರಸ್ ವಿರಚಿತ ದಕ್ಷಯಜ್ಞ ನಾಟಕ ಮೈಸೂರು ಭಾಗದಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಾ ಜನಪ್ರಿಯವಾಗಿದೆ. ಶಿವಲೀಲೆ ಎಂದೇ ಹೆಸರಾದ ನಾಟಕದಲ್ಲಿ ದಕ್ಷಬ್ರಹ್ಮ ಮತ್ತು ಭೃಗುಮುನಿಯ ಗರ್ವಭಂಗ ಜೊತೆಗೆ ಶೋಡಷ ಚಂದ್ರನ ಸ್ವಾರಸ್ಯ ಕಥೆಯೂ ಇದೆ. ಹಾಸನದಲ್ಲಿ ಹೆಚ್ಚಾಗಿ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರದರ್ಶಿತವಾಗುತ್ತಿವೆ. ಇನ್ನೂ ಹಲವು ಪೌರಾಣಿಕ ನಾಟಕಗಳು ದಾನ ಶೂರ ಕರ್ಣ, ಸತ್ಯ ಹರಿಶ್ಚಂದ್ರ, ಶ್ರೀ ಕೃಷ್ಣ ಗಾರುಡಿ, ದೇವಿ ಮಹಾತ್ಮೆ, ಶನಿಪ್ರಭಾವ, ಶ್ರೀಕೃಷ್ಣ ಲೀಲೆ ಮೊದಲಾಗಿ ಇವೆ. ಕಲಾವಿದರು ಹೊಸ ಹೊಸ ನಾಟಕಗಳನ್ನು ಕಲಿಯುವಲ್ಲಿ ಪಾತ್ರಗಳ ಪರಕಾಯ ಪ್ರವೇಶ ಮಾಡಿ ತಮ್ಮ ಅಭಿನಯ ಸಾವiರ್ಥ್ಯವನ್ನು ಕಲಾರಸಿಕರೆದುರು ಪ್ರದರ್ಶಿಸಬೇಕಿದೆ ಎಂದರು.
ನಟರು ಚನ್ನರಾಯಪಟ್ಟಣದ ನಂಜುಂಡೇಗೌಡರು, ಮಂಜುನಾಥ್ ದಿಂಡಗೂರು, ನಿರ್ದೇಶಕ ಡಿ.ಸಿ.ಪುಟ್ಟರಾಜುರವರನ್ನು ಇಂದೇ ಸಂದರ್ಭ ಸನ್ಮಾನಿಸಲಾಯಿತು. ನಟರುಗಳಾದ ಯಲಗುಂದ ಶಾಂತಕುಮಾರ್, ಯರೇಹಳ್ಳಿ ಮಂಜೇಗೌಡರು, ಸಿ.ಎಂ.ಶ್ರೀಕಂಠಪ್ಪ, ರಮೇಶ್‌ಗೌಡಪ್ಪ, ನಿ.ಪೊಲೀಸ್ ರಂಗಸ್ವಾಮಿ, ಎನ್.ಎಲ್.ಚನ್ನೇಗೌಡ, ವಕೀಲರು ತಿಮ್ಮೇಗೌಡರು ಇದ್ದರು. ಶ್ರೀಮತಿ ವೇದ ಪ್ರಾರ್ಥಿಸಿದರು. ಅಧ್ಯಕ್ಷರು ಡಿ.ವಿ.ನಾಗಮೋಹನ್ ವಂದಿಸಿದರು.