ಸಿಂದಗಿ; ಸಂಪತ್ತಿಗಾಗಿ ಎಲ್ಲರ ಹೋರಾಟ. ಆದರೆ ಭೌತಿಕ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ಸಂಪತ್ತು ಶಾಶ್ವತ. ನಿರಂತರ ಪರಿಶ್ರಮ ಮತ್ತು ಪ್ರಯತ್ನ ಇಲ್ಲದೇ ಜೀವನದಲ್ಲಿ ಶ್ರೇಯಸ್ಸು ಸಿದ್ಧಿಸದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಆದಿಶೇಷ ಸಂಸ್ಥಾನ ಹಿರೇಮಠದ ೩೦ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಡಾ||ಚಂದ್ರಶೇಖರಸ್ವಾಮಿ ಅವರ ೫೫ನೇ ವರ್ಷದ ಅನುಷ್ಠಾನ ಮಂಗಲ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ದೇವರ ಕಾರುಣ್ಯ ಕಿರಣ ಬೇಕು. ಸಂಸ್ಕಾರ ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆಯಬೇಕು. ಬಡತನ ಬಂದಿದೆ ಎಂದು ಕುಗ್ಗಬೇಡ. ಕತ್ತಲೆ ಸರಿದ ನಂತರ ಬೆಳಕು ಬಂದೇ ಬರುತ್ತದೆ ಎಂಬ ನಂಬಿಕೆಯಿರಲಿ. ದೇವರು ಮತ್ತು ಧರ್ಮವನ್ನು ಧಿಕ್ಕರಿಸುವ ಅಜ್ಞಾನಿಗಳಿಗೆ ದೈವ ಕೃಪೆ ಸಿಗದು. ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಮನುಷ್ಯನ ಮನಸ್ಸೇ ಮೂಲ ಕಾರಣ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಮನದ ಕಹಿತನ ಕಳೆದುಕೊಂಡು ಬಂದಾಗ ಜೀವನ ಸಾರ್ಥಕಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ನಾಲವಾರ ಆದಿಶೇಷ ಹಿರೇಮಠದ ಡಾ|| ಚಂದ್ರಶೇಖರಸ್ವಾಮಿ ಅವರು ಕಳೆದ ೫೫ ವರುಷಗಳಿಂದ ಶಿವಾನುಷ್ಠಾನ ಕೈಕೊಂಡು ಭಕ್ತ ಸಮುದಾಯಕ್ಕೆ ಆಶೀರ್ವದಿಸಿದ್ದನ್ನು ಎಷ್ಟು ನೆನಪಿಸಿದರೂ ಕಡಿಮೆಯೆಂದರೆ ತಪ್ಪಾಗದು. ಪ್ರತಿ ವರುಷ ಆದಿಶೇಷ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ೩೦ನೇ ವರ್ಷದ ಜಾತ್ರಾ ಮಹೋತ್ಸವ ಬಹಳ ವೈಶಿಷ್ಠ್ಯ ತೆಯಿಂದ ಜರುಗುತ್ತಿರುವುದು ಸಂತೋಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಅಸ್ಥಿರ ದೇಹ ನಂಬಿ ಶಾಶ್ವತ ಸುಖ ಕಳೆದುಕೊಳ್ಳಬಾರದು. ಶ್ರದ್ಧೆ ನಿಷ್ಠೆ ಮತ್ತು ಅನುಭಾವದಿಂದ ಬದುಕು ಸದೃಢಗೊಳ್ಳುತ್ತದೆ. ಮೃತ್ಯು ಮಾನವರಿಗಷ್ಟೇ ಅಲ್ಲ ಮಹಾತ್ಮರಿಗೂ ಬಿಟ್ಟಿಲ್ಲ. ಜೀವನ ವಿಕಾಸಕ್ಕೆ ಅಧ್ಯಾತ್ಮ ಅರಿವು ಪಡೆದುಕೊಂಡು ಗುರುಕಾರುಣ್ಯಕ್ಕೆ ಒಳಗಾಗಬೇಕು ಎಂದರು.
ನೇತೃತ್ವ ವಹಿಸಿದ ರಾಜಯೋಗಿ ವೀರಾಜಸ್ವಾಮಿಗಳು ಮಾತನಾಡಿ ಯಾವ ಸಂಪತ್ತಿಗಾಗಿ ಜಗದ ಜನ ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಶಿವ ಕೊಟ್ಟ ಮಂತ್ರ ಮರೆಯದೇ ಅರಿತು ನಡೆದರೆ ಇದೇ ಜನ್ಮದಲ್ಲಿ ಬಿಡುಗಡೆಯಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಚಿಂತನೆಗಳು ಸಕಲರಿಗೂ ದಾರಿದೀಪವೆಂದರು.
ಹರಸೂರು ಸಿದ್ಧರಾಮ ಶ್ರೀಗಳು, ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶ್ರೀಗಳು, ಕೆಂಭಾವಿ ಚನ್ನಬಸವ ಶ್ರೀಗಳು, ಮನಗೂಳಿ ಅಭಿನವ ಸಂಗನಬಸವ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಈ ಪವಿತ್ರ ಸಮಾರಂಭದಲ್ಲಿ ಶಿವಶರಣಪ್ಪ ಸಿರಿ, ಅಶೋಕ ವಾರದ, ಮಹೇಶ್ವರಿ ವಾಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಕುಮಾರಿ ಪೂಜಾ ನಂದೀಶ ಹಿರೇಮಠ ಮತ್ತು ಸಿದ್ಧಲಿಂಗಯ್ಯ ಹಿರೇಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

