ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು 

Must Read

ಕೃಷ್ಣಮೂರ್ತಿ ಪುರಾಣಿಕರು ಕಾದಂಬರಿಕಾರರೆಂದೇ ಖ್ಯಾತಿ ಪಡೆದವರು. ಅವರ ೧೧೭ ಕೃತಿಗಳಲ್ಲಿ ೮೦ ಕಾದಂಬರಿಗಳೇ. ಆದರೆ ಅವರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ಕಾವ್ಯದಿಂದ. ಕಡುಬಡತನದಲ್ಲಿ ಬಾಲ್ಯ ಕಳೆದ ಪುರಾಣಿಕರು ಹೈಸ್ಕೂಲ್ ಶಿಕ್ಷಣ ಪಡೆಯುವಾಗ ಅವರು ಆಶ್ರಯ ಪಡೆದಿದ್ದ ಮನೆಯೊಂದರಲ್ಲಿ ನಡೆದ ಘಟನೆ ಅವರ ಮೊದಲ ಕವನದ ಹುಟ್ಟಿಗೆ ಕಾರಣವಾಯಿತು. ಆಗೆಲ್ಲ ಬಾಲ್ಯವಿವಾಹ ಪದ್ಧತಿ ಇತ್ತು. ಗಂಡ ಸತ್ತರೆ ಆ ವಿಧವೆಯ ಪರಿಸ್ಥಿತಿ ಬಹಳ ಕೆಟ್ಟದ್ದಾಗಿರುತ್ತಿತ್ತು. ಅಂತಹ ಒಬ್ಬಳು ಬಾಲ ವಿಧವೆಯ ವೇದನೆ ಪುರಾಣಿಕರ ಮುಗ್ಧ ಮನ ಕದಡಿತು. ಅವಳ ಪಾಡು ಹಾಡಾಗಿ ಹೊರಬಂತು –

” ಸುಡು ಸುಡೆಲೆ ಸುಡು ಜೀವ
ಸುಡುಗಾಡ ಸೇರೇಳು
ಹುಡುಕದಿರು ಸಂತಸವ ಬಾಳಿನಲ್ಲಿ….”
ಕವನಗಳ ನಂತರ ಪುರಾಣಿಕರು ಕಾಲೇಜು ಹಂತದಲ್ಲಿ ಕುವೆಂಪು ಅವರ ಪ್ರಭಾವದಿಂದ “ಸರಳ ರಗಳೆ ನಾಟಕ” ಗಳನ್ನು ಬರೆಯಲಾರಂಭಿಸಿದರು. ರಾಧೇಯ, ಮಗನ ಗೆಲುವು, ರತಿವಿಲಾಪ , ಸೈರಂಧ್ರಿ, ದೊರೆಸಾನಿ, ವಾಸವದತ್ತೆ ಮೊದಲಾದ ಅವರ ಕೃತಿಗಳು ಎಷ್ಟೊಂದುಪ್ರಸಿದ್ದಿ ಪಡೆದವೆಂದರೆ ನಾಡಿನಾದ್ಯಂತ ಆಗ ಅವುಗಳ ರಂಗಪ್ರದರ್ಶನ ನಡೆಯುತ್ತಿತ್ತು. ಶಾಲೆ ಕಾಲೇಜುಗಳ ಗೆದರಿಂಗ್ ಗಳಲ್ಲಿ ಅವು ಪ್ರದರ್ಶಿಸಲ್ಪಡುತ್ತಿದ್ದವು.

ಅಂತಹ ಒಂದು ಉದಾಹರಣೆ ಕೊಡುವುದಾದರೆ –
೧೯೬೦ ರಲ್ಲಿ ಹೊನ್ನಾವರದ ಸೇಂಟ್ ಥಾಮಸ್ ಹೈಸ್ಕೂಲಿನ ಸುವರ್ಣ ಮಹೋತ್ಸವದ ೫೦ ನೇ ವಾರ್ಷಿಕೋತ್ಸವದಲ್ಲಿ ಪುರಾಣಿಕರ ” ಮಗನ ಗೆಲುವು” ನಾಟಕವನ್ನು ಅಭಿನಯಿಸಲಾಗಿತ್ತು. ಅದರಲಿ ಖ್ಯಾತ ಯಕ್ಷಗಾನ ನಟ ಕೆರೆಮನೆ ಶಂಭು ಹೆಗಡೆಯವರು ಅರ್ಜುನನ ಪಾತ್ರವನ್ನು ,ಗಜಾನನ ಹೆಗಡೆ ಚಿತ್ರಾಂಗದೆ ಪಾತ್ರವನ್ನು ಮತ್ತು ನಾನು ಬಭ್ರುವಾಹನನ ಪಾತ್ರವನ್ನು ನಿರ್ವಹಿಸಿದ್ದೆವು. ಆ ದಶಕದಲ್ಲಿ ಅವರು ಸರಳರಗಳೆಯ ಪುರಾಣಿಕರೆಂದೇ ಹೆಸರು ಪಡೆದಿದ್ದರು. ನಾಡಿನಹಿರಿಯ ಸಾಹಿತಿಗಳು ಅವನ್ನು ಕೊಂಡಾಡಿದ್ದರು.

ಮುಂದೆ ಒಮ್ಮೆ ಗೋಕಾಕಕ್ಕೆ ಶಿವರಾಮ ಕಾರಂತರು ಬಂದಾಗ ಪುರಾಣಿಕರಿಗೆ ಅವರು ಕಾದಂಬರಿಗಳ ರಚನೆಗೆ ಪ್ರೇರಣೆ ನೀಡಿದರು. ಆಗ ಪುರಾಣಿಕರು ೪೦ ರ ಹತ್ತಿರದಲ್ಲಿದ್ದರು. ೧೯೪೮ ರಲ್ಲಿ ಅವರ ಮೊದಲ ಕಾದಂಬರಿ “ಮುಗಿಲ ಮಲ್ಲಿಗೆ” ಹೊರಬಂತು. ವಿಶೇಷವೆಂದರೆ ಕಾದಂಬರಿ ಸಾರ್ವಭೌಮ ಅನಕೃ ಅವರು ಪುರಾಣಿಕರ ಕಾದಂಬರಿಯನ್ನು ಪ್ರಕಾಶಕರಿಗೆ ಶಿಫಾರಸು ಮಾಡಿದ್ದರು. ಮುಂದೆ ಕನ್ನಡ ವಾಚಕರಿಗೆ ಪುರಾಣಿಕರ ಕಾದಂಬರಿಗಳದೇ ಸುಗ್ಗಿ. ಒಂದಾದ ಮೇಲೊಂದು ಕಾದಂಬರಿಗಳು ಹೊರಬಂದವು. ಆಗ ಪಿ. ಟಿ. ಕೃಷ್ಣರಾವ್ ಎಂಬ ಹೆಸರಲ್ಲಿ ಬರೆಯುತ್ತಿದ್ದ ಅವರಿಗೆ ಕೃಷ್ಣಮೂರ್ತಿ ಪುರಾಣಿಕ ಎಂಬ ಹೆಸರಲ್ಲಿ ಬರೆಯುವಂತೆ ಮಾಡಿದ್ದೂ ಅ. ನ. ಕೃಷ್ಣರಾಯರೇ.

ಕನ್ನಡದಲ್ಲಿ ಚಲನಚಿತ್ರವಾಗಿ ಕಾದಂಬರಿಯೊಂದು ಮೊದಲ ಸಲ ತೆರೆಗೆ ಬಂದಿದ್ದೇ ಪುರಾಣಿಕರದು. ಅವರ ಧರ್ಮದೇವತೆ ” ಕರುಣೆಯೇ ಕುಟುಂಬದ ಕಣದಣು ” ಎಂಬ ಹೆಸರಲ್ಲಿ ಸಿನೆಮಾ ಆಗಿ ತೆರೆಗೆ ಬಂತು. ಮುಂದೆ ಕುಲವಧು, ಭಾಗೀರಥಿ, ದೇವರ ಕೂಸು, ಸನಾದಿ ಅಪ್ಪಣ್ಣ ಮುತ್ತೈದೆ, ಮಣ್ಣಿನ ಮಗಳು, ಬೆವರಿನ ಬೆಲೆ, ವಸಂತಲಕ್ಷ್ಮಿ, ಮೌನಗೌರಿ ಮೊದಲಾದವು ತೆರೆಗೆ ಬಂದವು. ಕನ್ನಡದಲ್ಲಿ ಅತಿಹೆಚ್ಚು ಕಾದಂಬರಿಗಳು ಸಿನೆಮಾ ಆದದ್ದು ಸಹ ಪುರಾಣಿಕರದೇ. (೧೫) ನಂತರ ತರಾಸು, ಅನಕೃ ಮೊದಲಾದವರದು. ತೆಲುಗು, ತಮಿಳು ಮಲೆಯಾಳಿ ಹಿಂದಿ ಭಾಷೆಗಳಲ್ಲೂ ತೆರೆ ಕಂಡಿವೆ. ಅವರ ಹದಿನೈದು ಕಾದಂಬರಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬಂದಿವೆ. ಮೂರು ಕಾದಂಬರಿಗಳು ಮರಾಠಿಗೆ ಅನುವಾದವಾಗಿವೆ.

ಬೇಂದ್ರೆ ಅವರ ಕಾವ್ಯಗುರುವಾಗಿದ್ದರು. ಜಾತಿಕಾರಣದಿಂದಾಗಿ ಅವರು ಸಾಕಷ್ಟು ತೊಂದರೆಗೀಡಾಗಿದ್ದುಂಟು. ಬದುಕಿನ ಕಷ್ಟ ಏನೆಂಬುದು ಅವರಿಗೆ ತಿಳಿದಿತ್ತು. ಅವರ ಕಾದಂಬರಿಗಳು ಜನಸಾಮಾನ್ಯರ ಬದುಕಿನ ನಡುವಿನಿಂದಲೇ ರೂಪುಗೊಂಡವು. ಯತ್ರ ನಾರ್ಯಸ್ತು ಪೂಜ್ಯಂತೇ…ಎನ್ನುವ ಅಂಶವನ್ನು ಅವರು ತಮ್ಮ ಹೆಚ್ಚಿನ ಎಲ್ಲ ಕಾದಂಬರಿಗಳಲ್ಲಿ ಎತ್ತಿಹಿಡಿದರು.ಹೆಣ್ಣು ಅವರಪಾಲಿಗೆ ದೇವತೆಯಿದ್ದಂತೆ. ರಂ. ಶ್ರೀ. ಮುಗಳಿಯವರು ಬರೆದಂತೆ “ಏನೂ ಯೋಚಿಸದೆ ಪಾಲಕರು ಹೆಣ್ಣುಮಕ್ಕಳ ಕೈಗೆ ಕೊಡಬಹುದಾದ ಕಾದಂಬರಿಗಳು ಪುರಾಣಿಕರವು”. ಎಲ್ಲೂ ಎಂದೂ ಅವರು ಸಭ್ಯತೆಯ ಎಲ್ಲೆ ಮೀರಲಿಲ್ಲ. ಅದು ಅವರ ತಂದೆ ತಾಯಿಯಿಂದ ಕಲಿತ ಸಂಸ್ಕೃತಿ. ಬಡತನದ ನಡುವೆಯೂ ಸ್ವಾಭಿಮಾನದಿಂದ ತಲೆ ಎತ್ತಿ ನಡೆಯುವ ಬದುಕು ಅವರದಾಗಿತ್ತು. ಬೆಳವಲ ನಾಡಿನ ಗ್ರಾಮೀಣ ಬದುಕಿನ ಸಂಸ್ಕೃತಿ ಒಳನೋಟಗಳೇ ಅವರ ಕಾದಂಬರಿಗಳ ಸಾರ. ಬಹಳ ಪ್ರಚಾರ ಪ್ರಸಿದ್ಧಿ ದೊರಕಿದ ಅವರ ಸನಾದಿ ಅಪ್ಪಣ್ಣ ಒಬ್ಬ ಜೀವಂತ ವ್ಯಕ್ತಿಯ ಬದುಕಿನ ಕತೆಯೇ ಆಗಿದೆ. ಅತ್ಯಂತ ಸರಳವಾದ ಸಂಭಾಷಣೆ ಅವರ ಕಾದಂಬರಿಗಳ ವೈಶಿಷ್ಟ್ಯ. ಆದ್ದರಿಂದಲೇ ಹೆಂಗಳೆಯರ ಅಚ್ಚುಮೆಚ್ಚಿನ ಕಾದಂಬರಿಕಾರರೆನಿಸಿದರು. ಬಹುತೇಕ ಅವರ ಕಾದಂಬರಿಗಳೆಲ್ಲವೂ ಸಾಮಾಜಿಕ/ ಕೌಟುಂಬಿಕ ಕಥಾವಸ್ತುವನ್ನೇ ಹೊಂದಿವೆ. ಅವುಗಳನ್ನು ಅವರು ಭಾನಾತ್ಮಕವಾಗಿ ಚಿತ್ರಿಸುತ್ತಿದ್ದರಾದರೂ ಅವುಗಳಲ್ಲಿ ಅಸಹಜವಾದುದು , ಅಸ್ವಾಭಾವಿಕವಾದುದು ಏನೂ ಇರುತ್ತಿರಲಿಲ್ಲ. ಏಕೆಂದರೆ ಬದುಕನ್ನು ಬಿಟ್ಟು ಸಾಹಿತ್ಯ ಇಲ್ಲವೆಂಬುದು ಅವರ ನಂಬಿಕೆಯಾಗಿತ್ತು. ಕಥೆಗಳು ಹೊರಬರುವುದೇ ಜೀವನದ ನಡುವಿನಿಂದ. ಅದನ್ನು ಓದುಗರಿಗೆ ಆಪ್ಯಾಯಮಾನವಾದ ರೀತಿಯಲ್ಲಿ ನೀಡುವುದೇ ಬರೆಹಗಾರನ ಕೆಲಸ ಎಂದು ಅವರು ಹೇಳುತ್ತಿದ್ದರು.

ಆದರೆ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ. ಜಾತಿ ಅಡ್ಡಬಂತು. ಎಂಥೆಂಥವರೆಲ್ಲ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗುತ್ತಿರುವಾಗ ಪುರಾಣಿಕರಿಗೆ ಆ ಗೌರವ ಸಿಗಲಿಲ್ಲ. ಹೈಸ್ಕೂಲ್ ಹೆಡ್ ಮಾಸ್ಟರ್ ಆಗಬೇಕಿತ್ತು. ಅದನ್ನು ತಪ್ಪಿಸಿದರು. ತೀವ್ರ ಅನಾರೋಗ್ಯ ಕಾಡದೇ ಇದ್ದಿದ್ದರೆ ಅವರಿಂದ ಇನ್ನೊಂದಿಷ್ಟು ಕಾದಂಬರಿಗಳು ದೊರಕುತ್ತಿದ್ದವು. ಅವರ ಕಾದಂಬರಿಗಳನ್ನು ಸಿನಿಮಾ ಮಾಡಿ ನಿರ್ಮಾಪಕ ನಿರ್ದೇಶಕರು ಹಣ ಮಾಡಿಕೊಂಡರು. ಪುರಾಣಿಕರಿಗೆ ಸಿಕ್ಕಿದ್ದು ಪುಡಿಗಾಸೇ.

ಪುರಾಣಿಕರು ಅಧ್ಯಯನಶೀಲರು. ಉತ್ತಮ ವಾಗ್ಮಿ. ಎಂತಹ ಸಭೆಯಲ್ಲೂ ಜನಮನ ಸೆಳೆಯುವ ಮಾತುಗಾರಿಕೆ. ಆಕರ್ಷಕ ವ್ಯಕ್ತಿತ್ವ. ಶಿಸ್ತಿನ ಬದುಕು ಅವರದು. ನಾನೇ ಹತ್ತಿರದಿಂದ ಕಂಡಂತೆ ಪ್ರತಿನಿತ್ಯ ತಪ್ಪದೇ ಬೆಳಗಿನ ೪ ಗಂಟೆಗೆ ಎದ್ದು ಬರೆಯಲು ತೊಡಗುತ್ತಿದ್ದರು. ಕನಿಷ್ಠ ಮೂರು ತಾಸು ಅವರ ಬರವಣಿಗೆ ನಿರಂತರ ಸಾಗುತ್ತಿತ್ತು. ಅಪಾರ ಜನಪ್ರಿಯತೆ ಹೊಂದಿದ್ದ ಅವರು ನಾಡಿನ ವಿವಿಧೆಡೆಗಳಿಂದ ಉಪನ್ಯಾಸಕ್ಕಾಗಿ ಆಮಂತ್ರಿತರಾಗುತ್ತಿದ್ದರು. ಆದರೆ ಎಂದೂ ತಮ್ಮ ಶಿಕ್ಷಕ ವೃತ್ತಿಯನ್ನು ಅಲಕ್ಷಿಸದೇ ಶ್ರದ್ಧೆಯಿಂದ ನಿರ್ವಹಿಸಿದರು. ಆದರ್ಶ ಶಿಕ್ಷಕರಾಗಿದ್ದ ಅವರು ಹುಟ್ಟಿದ್ದೂ ಸೆಪ್ಟೆಂಬರ್ ೫ ರಂದು . ಶಿಕ್ಷಕರ ದಿನದಂದು.

ಎಲ್. ಎಸ್. ಶಾಸ್ತ್ರಿ
‌‌

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group