ಅಡಹಳ್ಳಟ್ಟಿ: (ತಾ:ಅಥಣಿ) ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆ ಎಂಬುದನ್ನು ಸಾಧಿಸಿ ತೋರಿಸಬೇಕು. ಇಂತಹ ವಿಶೇಷ ಶಿಬಿರದಿಂದ ಪಡೆದ ಉತ್ತಮ ಅನುಭವಗಳು ಭವಿಷ್ಯದ ಬಾಳಿಗೆ ದಾರಿದೀಪವಾಗಬೇಕು ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಯೋಜನಾಧಿಕಾರಿ ಪ್ರೊ. ಶಂಕರ ಎಂ. ನಿಂಗನೂರ ಹೇಳಿದರು.
ಅವರು ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ರವಿವಾರದಂದು ಅಥಣಿಯ ಎಸ್.ಎಮ್.ಎಸ್. ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವಾರ್ಥ ಬಿಟ್ಟು ಬದುಕುವುದನ್ನು ಕಲಿಯಬೇಕು. ವೈಯಕ್ತಿಕ ಬದುಕಿನ ಜೊತೆಗೆ ಸಾಮಾಜಿಕ ಬದುಕಿನಲ್ಲೂ ತೊಡಗಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆಯನ್ನು ರೂಢಿಸಿಕೊಂಡು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರ ಗ್ರಾಮಗಳನ್ನಾಗಿ ಪರಿವರ್ತಿಸುವತ್ತ ಪ್ರಾಮಾಣಿಕ ಪ್ರಯತ್ನಮಾಡುವಂತೆ ಕರೆ ನೀಡಿದರು.
ಗ್ರಾಮ ಪಂಚಾಯತ ಸದಸ್ಯರಾದ ಭೀಮು ಬಸಪ್ಪ ಕೇರಿ ಮಾತನಾಡಿ ಶಿಬಿರಾರ್ಥಿಗಳು ಎಳು ದಿನಗಳ ಕಾಲ ನಿರ್ವಸಿದ ಕಾರ್ಯಚಟುವಟಿಕೆಗಳನ್ನು ಶ್ಲಾಂಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಲಚ್ಚಪ್ಪ ಪತ್ತಾರ ಮಾತನಾಡಿ, ಜೀವನ ಬಹಳ ಅಮೂಲ್ಯವಾದದ್ದು. ನಮ್ಮ ಸಮಾಜದ ಜೊತೆಗೆ ನಾವು ಬೆರೆಯುವ ಮೂಲಕ ಸಮಾಜ ಸೇವೆ ಮಾಡುತ್ತ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಅಡಹಳ್ಳಟ್ಟಿ ಪಿ.ಕೆ.ಪಿ.ಎಸ್. ಚೇರಮನ್ ರಾದ ಶ್ರೀಶೈಲ್ ತಾಂವಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳು ಉದ್ಧಾರವಾದಾಗ ಮಾತ್ರ ದೇಶ ಉದ್ಧಾರವಾಗುತ್ತದೆ. ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ಶಿಬಿರಗಳು ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಅದನ್ನು ಹಳ್ಳಿಯಲ್ಲಿ ಗಮನಿಸಬಹುದು. ಬುದ್ಧ ಬಸವ ಗಾಂಧೀಜಿಯವರ ಹಾದಿಯಲ್ಲಿ ನಡೆದರೆ ಕಲ್ಯಾಣ ರಾಷ್ಟ್ರ ಕಟ್ಟುವುದರಲ್ಲಿ ಸಂಶಯವಿಲ್ಲ. ಆ ದಿಶೆಯಲ್ಲಿ ನಾವೆಲ್ಲ ಮುಂದೆ ಸಾಗಬೇಕು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಶಿಬಿರದ ಮೂಲಕ ಕಲಿಯುವುದರ ಜೊತೆಗೆ ಗ್ರಾಮ ನೈರ್ಮಲ್ಯತೆ ಮತ್ತು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು. ಶ್ರೀ ಮಲ್ಲಪ್ಪ ಕೇರಿ ಶರಣರು ಆಶಿರ್ವಚನ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸವಂತಪ್ಪ ಗುಡ್ಡಾಪೂರ, ಗ್ರಾ.ಪಂ. ಸದಸ್ಯ ಹನಮಂತ ಹೊನವಾಡ, ಗ್ರಾಮಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ, ಪಿ.ಕೆ.ಪಿ.ಎಸ್. ಸದಸ್ಯ ಮುತ್ತಪ್ಪ ದೊಡ್ಡವಾಡ, ಮುಂತಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಹರ್ಷದ ಬನ್ಸೋಡೆ ನಿರೂಪಿಸಿದರು. ಶಿಬಿರಾಧಿಕಾರಿ ಅಚ್ಚುತಾನಂದ ಕೆ.ಎಮ್. ವಂದಿಸಿದರು.