೨೩-೨೦೨೪ ರ ಬರಗಾಲದ ಬೆಳೆ ಹಾನಿ ಪರಿಹಾರದಲ್ಲಿ
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ
ಮೂಡಲಗಿ – ೨೦೨೩ ರ ಮುಂಗಾರು ಹಂಗಾಮಿನಲ್ಲಿ ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಉಂಟಾಗಿದ್ದ ಬರಗಾಲ-ಪರಿಸ್ಥಿತಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ನೀಡುವ ಸಮಯದಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ೨೫ ಗ್ರಾಮಗಳಲ್ಲಿಯ ಸುಮಾರು ೩೬೮ ಅನರ್ಹ ಫಲಾನುಭವಿಗಳ ಖಾತೆಗೆೆ ಒಟ್ಟು ೦೧ ಕೋಟಿ ೧೩ ಲಕ್ಷ ೭೫೯ ರೂ.ಗಳನ್ನು ಜಮೆ ಮಾಡಿಸುವುದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟು ಮಾಡಿದ್ದಾರೆ ಎಂಬ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಬೆಳೆ ಹಾನಿಗೊಳಗಾಗಿದ್ದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಹಾರಧನ ನೀಡುವಲ್ಲಿ ಕರ್ತವ್ಯಲೋಪವೆಸಗಿರುವುದು ಸಾಬೀತಾಗಿರುವುದರಿಂದ ಈ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅನರ್ಹ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಿರುವ ಈ ಎಲ್ಲಾ ಹಣವನ್ನು ಅಧಿಕಾರಿಗಳ ಸ್ವಂತ ಜೇಬಿನಿಂದಲೇ ವಸೂಲಿ ಮಾಡಿ ಸರ್ಕಾರಕ್ಕೆ ಮರುಪಾವತಿಸಿಕೊಳ್ಳುವಂತೆ ಮತ್ತು ಪರಿಹಾರ ನೀಡದೇ ಇನ್ನೂ ಬಾಕಿ ಉಳಿದ ಅರ್ಹ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಬೆಳೆ ಹಾನಿಗೆ ಪರಿಹಾರ ನೀಡುವ ಸಮಯದಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸದೇ ಇರುವ ಕುರಿತು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಪ್ರಕಾರ ಆಯ್ಕೆ ಮಾಡಲಾಗಿರುವ ಗ್ರಾಮಗಳನ್ನು ಹೊರತುಪಡಿಸಿ ಆಯ್ಕೆ ಪಟ್ಟಿಯಲ್ಲಿರದ ಗ್ರಾಮಗಳ ಅನರ್ಹ ರೈತರಿಗೆ ಬರ ಪರಿಹಾರ ಹಣವನ್ನು ಜಮೆ ಮಾಡುತ್ತಿದ್ದ ವಿಷಯವನ್ನು ಅಲ್ಲದೇ ಇವರುಗಳ ನೀಡುತ್ತಿರುವ ಬೇಜವಾಬ್ದಾರಿಗಳ ಹೇಳಿಕೆಗಳ ಕುರಿತು ಸಮಗ್ರ ದಾಖಲೆಗಳ ಸಮೇತವಾಗಿ ದಿ: ೧೦-೦೬-೨೦೨೪ ರಂದೇ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದನ್ನು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ನಿರ್ದೇಶನದಂತೆ ತಹಶೀಲ್ದಾರ ಮೂಡಲಗಿ ಇವರು ದಿ: ೧೧-೦೬-೨೦೨೫ ರಂದು ಉಪ ವಿಭಾಗಾಧಿಕಾರಿ ಬೈಲಹೊಂಗಲ ಇವರಿಗೆ ನೀಡಿರುವ ವರದಿಯಲ್ಲಿ, ೨೫ ಗ್ರಾಮಗಳಲ್ಲಿನ ೩೬೮ ರೈತರು ಪರಿಹಾರಧನ ಪಡೆಯಲು ಅನರ್ಹರಾಗಿರುವ ವಿಷಯವನ್ನು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಸಲ್ಲಿಸಿರುವ ವರದಿಯನ್ನಾಧರಿಸಿ ಈ ಅನರ್ಹ ಫಲಾನುಭವಿಗಳ ಖಾತೆಗೆ ಪರಿಹಾರಧನ ತಪ್ಪಾಗಿ ಜಮೆಯಾಗಿರುವುದು ಎಂದು ಸಹ ಉಲ್ಲೇಖಿಸಿರುವರು. ಇದೇ ವಿಷಯವನ್ನು ದಿ: ೨೮-೦೬-೨೦೨೪ ರಂದು ಜಿಲ್ಲಾಧಿಕಾರಿಗಳ ಭೂಮಿ ವಿಭಾಗದ ಇ-ಮೇಲ್ ಗೆ ಕೂಡಾ ಕಳುಹಿಸಲಾಗಿದೆ ಎಂದು ತಿಳಿಸಿರುವ ವಿಷಯವನ್ನು ಕೂಡಾ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಹಶೀಲ್ದಾರರು ಮೂಡಲಗಿ ಇವರಿಂದ ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ ವರದಿ ಸಲ್ಲಿಸಿ ೧೯ ತಿಂಗಳುಗಳು ಗತಿಸಿದ್ದರು ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆಯೂ ಮುಖ್ಯ ಕಾರ್ಯದರ್ಶಿಯವರ ಗಮನ ಸೆಳೆಯಲಾಗಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ೨೦೨೩ ರ ಬೆಳೆ ಹಾನಿ ಪರಿಹಾರ ನೀಡುವ ಸಮಯದಲ್ಲಿ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪವೆಸಗಿ ಸರ್ಕಾರದ ಬೊಕ್ಕಸಕ್ಕೆ ೦೧ ಕೋಟಿ ೧೩ ಲಕ್ಷ ೭೫೯ ರೂ.ಗಳಷ್ಟು ಆರ್ಥಿಕ ನಷ್ಟವುಂಟು ಮಾಡಲು ಕಾರಣರಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮತ್ತು ಅಧಿಕಾರಿಗಳ ಸ್ವಂತ ಜೇಬಿನಿಂದ / ಅವರ ವೇತನದಿಂದಲೇ ಸರ್ಕಾರಕ್ಕೆ ಈ ಹಣವನ್ನು ಮರು ಪಾವತಿಸಿಕೊಳ್ಳುವಂತೆ ಅಲ್ಲದೇ ಬಾಕಿ ಉಳಿದ ಅರ್ಹ ರೈತರಿಗೂ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಕೂಡಾ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಮನವರಿಕೆಮಾಡಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರಾದ ಭೀಮಪ್ಪ ಗಡಾದ ಅವರು ಪ್ರಕಟಣೆಯ ಮೂಲಕ ತಿಳಿಸುವ ಮೂಲಕ ಸರ್ಕಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

