ಸಿಂದಗಿ : ಏಕಾಗ್ರತೆಯಿಂದ ಪಾಠ, ಪ್ರವಚನಗಳಿಗೆ ಹೆಚ್ಚಿನ ಒತ್ತು ಗುರುವೃಂದ ನೀಡಿದಾಗ ವಿದ್ಯಾರ್ಥಿಗಳು ಸಾಧನೆಯ ನಡೆಯಲ್ಲಿ ಹೆಜ್ಜೆಯಿರಿಸಲು ಸಾಧ್ಯ. ಗುರಿಸಾಧನೆಗೆ ಏಕಚಿತ್ತದ ಹಂಬಲ ಇರಬೇಕು ಅಂದಾಗ ಭವಿಷ್ಯತ್ತಿನ ಗುರಿ ತಲುಪಲು ಯುವ ಪೀಳಿಗೆಗೆ ಸಾಧ್ಯ. ಅದರಂತೆ ಕಾಲೇಜು ಅಭಿವೃದ್ಧಿ ಕೆಲಸ ಕಾರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೇ ನಮಗೆಲ್ಲ ಮುಖ್ಯ ಧ್ಯೇಯವಾಗಬೇಕು ಎಂದು ವಿಜಯಪುರದ ಡಿಡಿಪಿಐ ಡಾ. ಸಿ.ಕೆ.ಹೊಸಮನಿ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಅ ನಿರೀಕ್ಷಿತ ಭೇಟಿ ನೀಡಿ ಆಡಳಿತಾತ್ಮಕ ದಾಖಲೆಗಳನ್ನು ಪರಿಶೀಲಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಭವಿಷ್ಯಕ್ಕೆ ಕಾರಣಕರ್ತರಾಗಬೇಕು. ಆ ನಿಟ್ಟಿನಲ್ಲಿ ಪಿಯು ಕಾಲೇಜ ಉಪನ್ಯಾಸಕದವರು ಹೃದಯದಿಂದ ಶ್ರಮಿಸಬೇಕು. ಶೈಕ್ಷಣಿಕ ಪ್ರಗತಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯೊಂದಿಗೆ ಜೊತೆಯಾಗಿ ನಿಂತು ಸಹಕರಿಸಬೇಕು ಎಂದು ತಿಳಿಸಿದ ಅವರು, ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ವಿಶೇಷ ಪಾಠ, ಯೋಜನಾ ಕ್ರಮಗಳ ಮಾಹಿತಿ ಪಡೆದರು. ಫಲಿತಾಂಶ ವೃದ್ಧಿ, ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಅಸೈನ್ಮೆಂಟ್, ಕಿರು ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ಅಂಕಗಳ ಪರಿಶೀಲನೆ ನಡೆಸಿದರು. ವಾರ್ಷಿಕ ಪಠ್ಯ ಯೋಜನೆ ಕ್ರೋಢಿಕರಿಸಿದ ಅಂಕಗಳ ರಜಿಸ್ಟರ್ ಅನೇಕ ಮಹತ್ವದ ಆಡಳಿತಾತ್ಮಕ ದಾಖಲೆಗಳನ್ನು ಕೂಲಂಕುಷವಾಗಿ ಪರೀಶೀಲಿಸಿದರು.
ಎಲ್ಲ ದಾಖಲೆಗಳನ್ನು ಉತ್ತಮ ರೀತಿಯಲ್ಲಿ ಸರಿಯಾಗಿ ಸಂಗ್ರಹಿಸಿಟ್ಟಿದ್ದೀರಿ. ಕಳೆದ ವರ್ಷದ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಕೂಡಾ ತೃಪ್ತಿಕರವಾಗಿದೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.
ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಲ್ಲಿನ ಶ್ರೀ ಪವಿವ ಸಂಸ್ಥೆಯ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮೀಜಿಯವರ ಕೃಪೆಯಿಂದ ದೊರಕುತ್ತಿರುವುದು ವಿಶೇಷವಾಗಿದೆ. ಅದಲ್ಲದೆ ಈಗಿನ ಪೂಜ್ಯರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರ ಆಶೀರ್ವಾದ ಹಾಗೂ ಸಂಸ್ಥೆಯವರ ಕೊಡುಗೆ ಬಹಳ ಅಪಾರವಾಗಿದೆ. ಕಾಲೇಜು ಸುಸಜ್ಜಿತ ಕಟ್ಟಡ ಹೊಂದಿದ್ದು ಸುತ್ತಲೂ ಶುಚಿತ್ವ ಕಾಪಾಡಲಾಗಿದೆ ಎಂದರು.
ಡಿಡಿಪಿಯು ಡಾ. ಸಿ.ಕೆ.ಹೊಸಮನಿ ಅವರಿಗೆ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಡಾ. ಶರಣಬಸವ ಜೋಗೂರ, ಶಿವಶರಣ ಬೂದಿಹಾಳ, ಎನ್.ಬಿ.ಪೂಜಾರಿ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ಗವಿಸಿದ್ದಪ್ಪ ಆನೆಗುಂದಿ, ರಾಹುಲ ನಾರಾಯಣಕರ್, ಶಿವಯೋಗಿ ತಾಳಿಕೋಟಿ, ಪಿ.ಎಸ್.ಸರನಾಡಗೌಡ, ವ್ಹಿ.ಕೆ.ಹಿರೇಮಠ, ಜಿ.ಎಂ.ಗಾಣಗೇರ್, ಎಂ.ಐ.ಮುಜಾವರ್, ಡಾ. ವಿಶ್ವನಾಥ ನಂದಕೋಲ, ಪಿ.ಬಿ.ಜೋಗೂರ, ಸಂಗಮೇಶ ಚಾವರ್, ಎನ್.ಎಂ.ಶೆಳ್ಳಗಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಪ್ರಿಯಾಂಕಾ ಪಡಶೆಟ್ಟಿ, ರೋಹಿತ್ ಸುಲ್ಪಿ, ರಾಹುಲ ದಾಸರ್, ಎಸ್.ಎಸ್.ಹೂಗಾರ, ಸೇರಿದಂತೆ ಇನ್ನಿತರರು ಇದ್ದರು.