ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2023-24 ನೆಯ ಸಾಲಿನ ಕ್ರೀಡಾ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಕ್ರೀಡೆಗಳು ಮಕ್ಕಳಲ್ಲಿ ಉತ್ತಮ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಆಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಗೆಲುವಿನ ಸಂಭ್ರಮ, ಸೋಲಿನ ಪಾಠ ಎರಡರ ಅನುಭವವನ್ನೂ ಆಟಗಳು ನೀಡುತ್ತವೆ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿನೋದ ಏಣಗಿ, ಮೌನೇಶ ಗರಗದ, ಸಿದ್ದು ಕುರಿ, ಪ್ರವೀಣ ಜೋಗಿಗುಡ್ಡ, ಕ್ರೀಡಾ ಮಂತ್ರಿ ಅಭಿಲಾಷ ಹೊಂಗಲ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಕ್ಕಳ ವೈಯಕ್ತಿಕ ಹಾಗೂ ಗುಂಪು ಆಟಗಳು ಜರುಗಿದವು.
ಎಸ್. ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಶಿಕ್ಷಕರಾದ ಜೆ.ಆರ್. ನರಿ, ಆರ್.ಸಿ. ಸೊರಟೂರ, ಎಚ್.ವಿ.ಪುರಾಣಿಕ, ಎಸ್.ವಿ. ಬಳಿಗಾರ, ವಿ.ಬಿ. ಪಾಟೀಲ, ಎಸ್.ಬಿ.ಹತ್ತರಕಿ ಉಪಸ್ಥಿತರಿದ್ದರು. ನಿರ್ಮಲಾ ಸೊಗಲದ ನಿರೂಪಿಸಿದರು. ಪ್ರಭಾವತಿ ಆಡಿನ ಸ್ವಾಗತಿಸಿದರು. ಅಕ್ಷತಾ ಚಚಡಿ ವಂದಿಸಿದರು.