ನೆನಪಾಗುತ್ತಾರೆ
ಗೆಳೆಯರೆ
ಸತ್ಯ ಶುದ್ಧತೆಗೆ
ಇಲ್ಲ ಬೆಲೆ ಗೌರವ
ಉಪ್ಪಿನಲ್ಲಿ ಕಾಣದ
ಇರುವೆಗಳು
ಸಕ್ಕರೆಯಲ್ಲಿ ಮುಕ್ಕುತ್ತವೆ.
ಹಾಲು ಮಾರುವವನು
ಓಣಿ ಕೇರಿ ತಿರುಗಬೇಕು
ಹಾಲು ಕೊಳ್ಳುವವರು
ಕೇಳುತ್ತಾರೆ
ನೀರೆಷ್ಟು ಬೆರೆಸಿದೆಯೆಂದು
ಆಲ್ಕೊಹಾಲ್ ಮಾರುವವನ
ಅಂಗಡಿಯಲ್ಲಿ ಜನ ಜಂಗುಳಿ
ಅವರೆ ಸಾರಾಯಿಯಲ್ಲಿ
ನೀರು ಸೋಡಾ ಬೆರೆಸಿ
ಸಂಭ್ರಮಿಸುತ್ತಾರೆ
ಮನುಷ್ಯನಿಗೆ ಪಶುವೆಂದರೆ
ಎಲ್ಲಿಲ್ಲದ ಕೋಪ
ಸಿಂಹ ಹುಲಿಯೆಂದರೆ
ಹಿಗ್ಗಿ ಕುಣಿಯುತ್ತಾನೆ.
ಪಾಪ ಅವನಿಗೆ ಗೊತ್ತಿಲ್ಲ
ಅವುಗಳು ಪಶುವೆಂದು
ತಿಳಿ ನೀರಿನಲ್ಲಿ ಎಂದೂ
ಮೀನು ವಾಸಿಸುವುದಿಲ್ಲ
ಕೊಳಚೆಯಲ್ಲಿ ಅವುಗಳ ಸಂತೆ
ಸತ್ಯ ಹೇಳುವವನಿಂದು
ಒಂಟಿಯಾಗುತ್ತಿದ್ದಾನೆ
ಸುಳ್ಳಿಗೆ ಸನ್ಮಾನದ ಪಟ್ಟ
ನೆನಪಾಗುತ್ತಾರೆ
ಬುದ್ಧ ಬಸವ ಬಾಪು
ಸತ್ಯ ಹೇಳಿ
ಬಿಟ್ಟು ಹೋದರು ಜಗವ
________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

