ನೆಲದ ನಾಲಿಗೆ ಮೇಲೆ
ಆ ಗುಡಿಸಲೊಳಗೆ
ಬರೀ ಬಿಕ್ಕಳಿಕೆಗಳೆ
ಸುಕ್ಕುಗಟ್ಟಿವೆ,
ನೆತ್ತರು ಮೆತ್ತಿದ
ಪ್ರಶ್ನೆಗಳು-
ಇನ್ನೂ ಉಸಿರಿಡಿದಿವೆ.
ಈ ಅರಮನೆಯೊಳಗೆ ಬರೀ ಸೊಕ್ಕುಗಳೆ
ತೊಟ್ಟಿಕ್ಕುತ್ತಿವೆ;
ಹಾಲಾಹಲದ ನಂಜುಂಡು,
ಬಡಿವಾರದಲಿ ಗರ ಬಡಿದಂತೆ
ಹಾಸಿದೆ ಬೆಳಕು.
ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು,
ಬಾಳು ಸಜೆ ಹಡೆದು;
ಎಂದೋ ಶವ ಸುಟ್ಟಂತಾಗಿದೆ
ಒಲೆಯ ಬೂದಿ.
ಈ ಅರಮನೆಯೊಳಗೆ ಮುಗ್ಧರ ರಕ್ತದಲಿ
ಮುಖ ತೊಳೆದು,
ಅಮೃತದ ಮಳೆ ಸುರಿದು
ಕಾಮನೆಯ ಫಸಲು
ನಿಡುಸುಯಿದು…
ಆ ಗುಡಿಸಲೊಳಗೆ ಹೊಟ್ಟೆಯ ಬಟ್ಟಲು ತುಂಬ
ಹಸಿವಿನ ಚಿತೆಯ ಬಿಂಬ;
ನೇಗಿಲ ತುಟಿ ತಾಗಿದರೂ
ಈ ನೆಲದ ನಾಲಿಗೆ ಬಡವರ ಬಾಳನ್ನೇ ನಲುಗಿಸಿದೆ
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

