ಕವನ : ಕಾವ್ಯದ ಮರಣ ಶಾಸನ

Must Read

ಕಾವ್ಯದ ಮರಣ ಶಾಸನ

​ಬರೆಯಲಾರೆ ಮತ್ತೆಂದಿಗೂ ಕವಿತೆ ಮನುಷ್ಯನೊಳಗಿನ ಮನಸ್ಸಿನ ಕಲೆ;
ನಾಜೂಕಿನಲಿ ಮಲಗಿಬಿಟ್ಟಿವೆ ಇಲ್ಲಿ
ಓದುಗರಿಲ್ಲದೆ ಬರೆದ ಸಾಲುಗಳು,
ಬಾಯ್ದೆರೆದ ಎರೆಬೀಡಿನಂತೆ.
​ಅಕ್ಷರಗಳು ಹೂ ಮುಡಿದರೂ
ಕಳೆಗುಂದಿದ ಸಂಜೆಯಂತಿವೆ

ಮೋಬೈಲಿನ ಭಾವಕೋಶದಲಿ
ಬೆರಳುಗಳ ತೇವಕ್ಕೆ ಮರುಳಾಗಿ,
ಭಾವದ ಮೈಥುನದಲಿ ಬಿಸಿಯಾಗಿವೆ.
​ಬೀಸುವ ಗಾಳಿ ಮೈಯ ಸವರುವಂತೆ,
ಪಾಳು ಹೊಲದಲಿ ಕವಣೆ ಬೀಸಿದಂತೆ;
ಕಳೆದುಕೊಂಡ ಸಮಯ, ತೊಳೆದುಕೊಂಡ ಭಾವ
ಅಷ್ಟಿಷ್ಟಲ್ಲ ನನ್ನ ಪಾಲಿಗೆ…
ನಾನು ಮುಪ್ಪಿಗೆ ಸರಿಯುವ ಹೊತ್ತಿಗೆ
ಯಾರನ್ನೂ ಕಾಡದೆ ಮೌನವಾಗುವೆ

ಬರೆಯಲಾರೆ ಮತ್ತೆಂದಿಗೂ ಕವಿತೆ.
​ಆದರೂ…
ಬತ್ತದ ಸೆಲೆಯಂತೆ ಎದೆಯಾಳದಿ ಮತ್ತೆ ಚಿಗುರೊಡೆಯುವುದು ಮೌನದ ಅಕ್ಷರ;
ಬರೆಯಲಾರೆ ಅಂದರೂ ಸುಮ್ಮನಿರದು ಜೀವ
ಇದು ಅಂತರಾತ್ಮದ ಅವಿರತ ಸಾಕ್ಷಾತ್ಕಾರ.
​ಯಾರೂ ಓದದಿದ್ದರೇನು?
ನನ್ನೊಳಗಿನ ಬೆಂಕಿಗೆ ನಾನೇ ಗಾಳಿಯಾಗುವೆ;
ಕತ್ತಲ ಹಾದಿಯಲಿ ನಂದದ ದೀಪವಾಗಿ
ಅಳಿವಿಲ್ಲದ ಪ್ರೀತಿಯ ಸಾಲುಗಳನು
ಮತ್ತೆ ಮತ್ತೆ ಬರೆಯುತ್ತಲೇ ಇರುವೆ.

​ಬರಿ ಹಾಳೆಯ ಮೇಲೆ ಹರಿಸಿದ ರಕ್ತದಲಿ
ಜಿನುಗುತ್ತಿದೆ ನನ್ನ ಅಸ್ತಿತ್ವದ ನೋವು;
ಹಂಗಿನಲಿ ಬಂದ ಹರಟೆಯ ನಡುವೆ
ಬಲಿಯಾಗುತ್ತಿದೆ ಅಕ್ಷರಗಳ ಸಾವು.
​ದೀಪವಿಲ್ಲದ ಮನೆಯಲಿ ಕಣ್ಣು ತೆರೆದಂತೆ
ಬೆಳಕಿಲ್ಲದ ಊರಿನಲಿ ಸದ್ದು ಮಾಡಿದಂತೆ;
ನನ್ನ ಕಾವ್ಯದ ಗರ್ಭಪಾತಕ್ಕೆ ಸಾಕ್ಷಿಯಾಗಿ
ಮತ್ತೆಂದೂ ಹುಟ್ಟದಂತೆ ಮಣ್ಣಾಗಲಿ ಭಾವನೆ
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

LEAVE A REPLY

Please enter your comment!
Please enter your name here

Latest News

ಪ್ರಕೃತಿ ಮತ್ತು ಪ್ರೀತಿಯ ಅದ್ಭುತ ಸಂಗಮ: ಮೇಘದೂತದ ಮಹತ್ವ ವಿವರಿಸಿದ ಪ್ರೊ. ನಾರಾಯಣಘಟ್ಟ

    ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು. ...

More Articles Like This

error: Content is protected !!
Join WhatsApp Group