ಮಳೆ ಮತ್ತು ಅವಳು
————————–
ಸೋನೆ ಮಳೆ ತುಂತುರು ಹನಿ
ಅವಳು ಮಧುರ ಭಾವದ ಮಣಿ
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಒಳಗೊಳಗೆ ಅನುಭಾವದ ಬಗೆ.
ಭೂಮಿ ಆಗಸ ಒಂದು ಮಾಡಿ
ರಾತ್ರಿಯಿಡಿ ಜಡೆಯುವ ಪರಿ.
ಬಾಳು ಬಟ್ಟೆಗೆ ಉಸಿರಿಟ್ಟ ನಾರಿ
ಸುತ್ತಲಿನ ಬೇರಿಗೆ ತೃಷೆಯ ವಾರಿ
ಗುಡುಗು ಸಿಡಿಲು ಮಿಂಚು ಅಬ್ಬರ
ಮರಗಳುರುಳಿ ಸತ್ತವು ಮೇಕೆ ಹಸು
ನಂಜು ನುಂಗಿ ಮುಖವೆತ್ತಿ
ತುತ್ತು ಹಾಕಿದಳು ಹಸುಗೂಸುಗಳಿಗೆ
ಗಾಳಿ ಚಂಡ ಮಾರುತ ಹುಯಿಲೆದ್ದವು
ಗುಡಿಸಲು ಚಪ್ಪರ ಕಿತ್ತುಕೊಂಡು
ಬಯಲಲಿ ಬಿದ್ದರೂ ಸೆರಗಲಿ ಸಲುಹಿದಳು
ಬಿಕ್ಕಿ ಅಳುವ ನೆನೆದ ಕಂದಮ್ಮಗಳು
ಸಿಂಪಿ ಬಾಯ್ಬಿಟ್ಟಿದೆ ಬಿರುಕು ಮನ
ಹೊಯ್ಯುತಿದೆ ಸ್ವಾತಿ ಮುತ್ತು
ಒಳಗೊಳಗೆ ಸುನಾಮಿ ಆತಂಕ
ಜೀವ ಸವೆದಳು ತೊರೆದು ಕುತ್ತು
ಹಳ್ಳ ಕೊಳ್ಳ ಹರಿದು ನಲಿದವು
ಸುತ್ತ ಹಸುರಿನ ಕಾಡು
ದೈವಲೀಲೆ ಮೋಹ ಮಾಯೆ
ಅವ್ವ ಮಾತೆ ಕರುಳ ತಾಯೆ
——————————-
ನನಗೆ ನಾನೆ ನೆರಳು
____________________
ದೂರ ಇರೋಣ
ಕನಸು ತೊರೆದು
ಭಾವ ಮರೆತು
ವಾಸ್ತವ ಪ್ರಜ್ಞೆಯ
ಗೂಡಿನಲ್ಲಿ
ಮುಸ್ಸಂಜೆ ಹಕ್ಕಿ
ಮಿನುಗುವ ಚುಕ್ಕಿ
ಮರದ ಪೊದರಿನ
ಧ್ವನಿ ಇಂಚರ
ಮಧುರ ಕಿವಿಯಲ್ಲಿ
ಬೆಳದಿಂಗಳು ಕಡಲದಡಿ
ಹೆಜ್ಜೆ ಹಾಕಿ ನಡೆದಿದ್ದೆ
ಪಾದಕ್ಕೆ ಅಪ್ಪಳಿಸಿದ
ಸಮುದ್ರದ ಅಲೆಗಳು
ನನ್ನ ಭ್ರಮೆಗೆ ನಕ್ಕವು
ಬೇಡ ನನಗೆ ಜನ ಜಂಗುಳಿ
ಬೇಡ ಬೇಡ ಶಬ್ದ ಸೂತಕ
ನನಗೆ ನಾನೆ ನೆರಳು
ನಡೆ ಕಾಣುವ ಬೆಳಕು
ನೆಮ್ಮದಿಯ ಬದುಕು
______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ