ಉತ್ತರಾಯಣ ಪುಣ್ಯಸ್ನಾನ ಮಾಡಿದ ಜನತೆ
ಹುನಗುಂದ:: ತಾಲೂಕಿನ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳವಾದ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಜನ ಉತ್ತರಾಯಣ ಪುಣ್ಯಕಾಲದಲ್ಲಿ ಮಿಂದೆದ್ದು ಕ್ಷೇತ್ರಾಧಿಪತಿ ಕೂಡಲಸಂಗಮನಾಥನ ಕೃಪೆಗೆ ಪಾತ್ರರಾದರು.
ಸೂರ್ಯನು ತಾನು ಚಲಿಸುವ ಪಥ ಬದಲಿಸುವ ದಿನವಾದ ಮಕರ ಸಂಕ್ರಮಣದ ಕಾಲದ ಶುಭ ಸಂದರ್ಭದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಕೃಷ್ಣಾ ಘಟಪ್ರಭಾ ಮಲಪ್ರಭಾ ನದಿಯ ಸಂಗಮದಲ್ಲಿ ಮಿಂದೆದ್ದರು. ನಂತರ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿಯನ್ನು ಎಳ್ಳು ಬೆಲ್ಲ ತಿಂದು ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಿದರು.
ಕೂಡಲಸಂಗಮಕ್ಕೆ ಹೋಗುವ ರಸ್ತೆ ಬದಿಯ ಜಮೀನುಗಳಲ್ಲಿ ಅಲ್ಲಲ್ಲಿ ತಂಡೋಪತಂಡವಾಗಿ ತಾವುಗಳು ಮನೆಯಿಂದ ಮಾಡಿಕೊಂಡು ಬಂದ ಸಿಹಿ ತಿಂಡಿ,ಅಡುಗೆಗಳ ಸವಿಭೋಜನ ಸವಿದರು.

